ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದನೆ ಮತ್ತು ರಾಷ್ಟ್ರವಿರೋಧಿ ಶಕ್ತಿಗಳ ಎದುರು ಭಾರತ ಎಂದಿಗೂ ಮಣಿಯುವುದಿಲ್ಲ ಎಂಬುದಕ್ಕೆ ‘ಆಪರೇಷನ್ ಸಿಂದೂರ್’ ಒಂದು ದೃಢ ಸಂಕೇತವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆದು ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಸಚಿವರು, “ಇದು ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿರದೆ ದೇಶದ ಏಕತೆ ಮತ್ತು ಧೈರ್ಯದ ಸಂಕೇತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ತಿಳಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಇದೇ ವಿಷಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು, “ಒಂದು ವರ್ಷದ ಹಿಂದೆ ನಮ್ಮ ಸಶಸ್ತ್ರ ಪಡೆಗಳು ತಮ್ಮ ಶೌರ್ಯವನ್ನು ಪ್ರದರ್ಶಿಸಿ, ಜನರ ಮೇಲೆ ದಾಳಿ ಮಾಡಿದವರಿಗೆ ಸೂಕ್ತ ಉತ್ತರ ನೀಡಿದ್ದವು. ಪ್ರತಿಯೊಬ್ಬ ಭಾರತೀಯನು ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯ ಭಾವನೆ ಹೊಂದಿದ್ದಾನೆ” ಎಂದು ಸ್ಮರಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕೂಡ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು, “ಪಹಲ್ಗಾಮ್ ಉಗ್ರರ ದಾಳಿಗೆ ನಡೆಸಲಾದ ಈ ಪ್ರತಿ-ಕಾರ್ಯಾಚರಣೆಯು, ಭಯೋತ್ಪಾದನೆಯ ವಿರುದ್ಧ ಭಾರತ ಹೊಂದಿರುವ ಶೂನ್ಯ ಸಹಿಷ್ಣುತಾ ನೀತಿಯನ್ನು ಎತ್ತಿಹಿಡಿದಿದೆ” ಎಂದು ತಿಳಿಸಿದ್ದಾರೆ.



