ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಅಡುಗೆ ಅನಿಲ ಹಾಗೂ ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೆಹಲಿಯಲ್ಲಿಂದು ಅಂತರ್ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟನಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ಅಡಚಣೆಯಾಗಿತ್ತು ಆದರೂ ಸರ್ಕಾರ ಶೇಕಡ 100ರಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ಗೃಹ ಬಳಕೆ ಅಡುಗೆ ಅನಿಲ ಪೂರೈಸಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ.
ವಾಣಿಜ್ಯ ಬಳಕೆ ಅನಿಲ ಸಿಲೆಂಡರ್ ಗಳ ಪೂರೈಕೆಯು ಶೇಕಡಾ 70 ರಷ್ಟಿದೆ ಎಂದರು. ವಾಣಿಜ್ಯ ಅಡುಗೆ ಅನಿಲ ದರ ಏರಿಕೆಯಾಗಿದ್ದು, ಗೃಹ ಬಳಕೆ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿಲ್ಲ. 5 ಕೆಜಿ LPG ಸಿಲೆಂಡರ್ ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ನಿನ್ನೆ 1 ಲಕ್ಷದ 20 ಸಾವಿರ ಸಿಲೆಂಡರ್ ಗಳು ಮಾರಾಟವಾಗಿವೆ. ಹೊಸದಾಗಿ 6 ಲಕ್ಷ 31 ಸಾವಿರ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಸಂಪರ್ಕಗಳನ್ನು ಒದಗಿಸಲಾಗಿದೆ. 6 ಲಕ್ಷಕ್ಕೂ ಅಧಿಕ ಗ್ರಾಹಕರು ಈ ಸಂಪರ್ಕಗಳಿಗೆ ನೋಂದಾಯಿಸಿಕೊಂಡಿದ್ದು, 49 ಸಾವಿರಕ್ಕೂ ಅಧಿಕ ಗ್ರಾಹಕರು LPG ಸಂಪರ್ಕವನ್ನು ಸ್ವಯಂ ತ್ಯಜಿಸಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಕಚ್ಚಾ ತೈಲ ಶುದ್ಧೀಕರಣ ಘಟಕಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು. ಬಂದರು, ಹಡಗು ಹಾಗೂ ಜಲಮಾರ್ಗ ಸಚಿವಾಲಯದ ನಿರ್ದೇಶಕ ಒಪೇಶ್ ಕುಮಾರ್ ಶರ್ಮಾ, ಕೊಲ್ಲಿ ಪ್ರಾಂತ್ಯದಲ್ಲಿನ ಎಲ್ಲ ಭಾರತೀಯ ಹಡಗು ಸಿಬ್ಬಂಧಿ ಸುರಕ್ಷಿತವಾಗಿದ್ದಾರೆ, ಸುಮಾರು 3 ಸಾವಿರ ಜನರನ್ನು ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ. ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿವೆ ಎಂದು ತಿಳಿಸಿದರು.



