ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮೈಸೂರು ಅರಮನೆ ಆವರಣದಲ್ಲಿ ನಂದಿ ಧ್ವಜನ ಪೂಜೆ ವೇಳೆ ಸಚಿವರನ್ನು ತಡೆದ ಪ್ರಕರಣದ ಬಗ್ಗೆ ವಿಚಾರಿಸಿ ವರದಿ ನೀಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಆದರೂ ಅಧಿಕಾರಿಗಳ ಉಡಾಫೆ ಸಹಿಸಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಅದೇಶಿಸಿದ್ದೇನೆ ಎಂದು ಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
ನಂದಿಧ್ವಜದ ಪೂಜೆಯ ವೇಳೆ ಸಿಎಂ ಹಿಂಬದಿಯಲ್ಲಿ ಇದ್ದ ಸಚಿವರನ್ನು ಭದ್ರತಾ ಕಾರಣಗಳಿಂದ ತಡೆಯಲಾಗಿದೆ. ಎಸ್‌ಪಿ ರಿಷ್ಯಂತ್ ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. ತದನಂತರ ಸಿಎಂ ವಾಪಾಸ್ ಬಂದು ಸಚಿವರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಪೂಜೆ ವೇಳೆ ಅಡ್ಡಗಟ್ಟಿದ್ದು ದಲಿತ ಸಚಿವರಿಗೆ ಮಾಡಿರುವ ಅವಮಾನ ಎನ್ನುವ ಮಾತು ಕೇಳಿಬಂದಿದೆ.



