ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಸಂಸದೀಯ ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. 79ರ ವಯಸ್ಸಿನಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿರುವ ಅವರು, ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಪುಸ್ತಕದ ಮೊದಲ ನೋಟದ ವಿಡಿಯೋ ರೀಲ್ಸ್ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ. ಈವರೆಗೆ ಫೇಸ್ಬುಕ್, ಎಕ್ಸ್ ಅಥವಾ ಇನ್ಸ್ಟಾಗ್ರಾಮ್ನಂತಹ ಯಾವುದೇ ಡಿಜಿಟಲ್ ವೇದಿಕೆಗಳಲ್ಲಿ ಖಾತೆ ಹೊಂದಿರದ ಅವರು, ಇದೇ ಮೊದಲ ಬಾರಿಗೆ ನೇರವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ಇನ್ಸ್ಟಾಗ್ರಾಮ್ ಆಯ್ಕೆ ಮಾಡಿಕೊಂಡಿದ್ದಾರೆ.
ಹಂಚಿಕೊಳ್ಳಲಾದ ಭಾವನಾತ್ಮಕ ವಿಡಿಯೋದಲ್ಲಿ, ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯ ಮುದ್ರಿತ ಪ್ರತಿಯನ್ನು ಮೊದಲ ಬಾರಿಗೆ ಅತ್ಯಂತ ಖುಷಿಯಿಂದ ಕೈಗೆತ್ತಿಕೊಂಡು ಪುಟಗಳನ್ನು ತಿರುಗಿಸುವುದನ್ನು ಕಾಣಬಹುದು. ಪಕ್ಕದಲ್ಲೇ ಕುಳಿತಿರುವ ಮಗಳು ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ಪುಸ್ತಕದಲ್ಲಿರುವ ಹಳೆಯ ಅಪರೂಪದ ಛಾಯಾಚಿತ್ರಗಳನ್ನು ತೋರಿಸುತ್ತಾ, “ಪ್ರಿಯಾಂಕಾ, ನೋಡು ಇಲ್ಲೆಲ್ಲಾ ತುಂಬಾ ಹಳೆಯ ಚಿತ್ರಗಳಿವೆ” ಎಂದು ಹರುಷದಿಂದ ಹೇಳುತ್ತಾರೆ. ಈ ಪುಸ್ತಕದಲ್ಲಿ ದಿವಂಗತ ಪತಿ ರಾಜೀವ್ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಅವರ ಬಾಲ್ಯದ ಅಪರೂಪದ ಕೌಟುಂಬಿಕ ಕ್ಷಣಗಳು ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ ಅವರು ಈ ಸುಂದರ ಕ್ಷಣದ ಸಂಭ್ರಮವಾಗಿ ಸಿಹಿತಿಂಡಿಗಳನ್ನು ಹಂಚುವುದು ಕಂಡುಬಂದಿದೆ.
https://www.instagram.com/reel/DeyJ8QEt3wI/?utm_source=ig_web_button_share_sheet
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿರುವ ಸೋನಿಯಾ ಗಾಂಧಿ, “ಎಲ್ಲರಿಗೂ ನಮಸ್ಕಾರ, ಈ ಸುಂದರ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗುತ್ತಿದೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯ ಮೊದಲ ನೋಟ ಇಲ್ಲಿದೆ. ಇದು ಪ್ರೀತಿ, ಕರ್ತವ್ಯ, ಅಗಲಿಕೆಯ ನೋವು ಮತ್ತು ಬದುಕಿನ ನೈಜ ಅರ್ಥವನ್ನು ಕಂಡುಕೊಳ್ಳುವ ಪಯಣದ ಕಥೆಯಾಗಿದೆ. ಈ ಪುಸ್ತಕವನ್ನು ನಿಮ್ಮ ಕೈಗಿಡಲು ನಾನು ಕಾತರಳಾಗಿದ್ದೇನೆ” ಎಂದು ಬರೆದಿದ್ದಾರೆ.
ತಮ್ಮ ಮೊದಲ ಪೋಸ್ಟ್ನಲ್ಲೇ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪುಸ್ತಕದ ಪ್ರಕಾಶನ ಸಂಸ್ಥೆಯಾದ ಹಾರ್ಪರ್ಕಾಲಿನ್ಸ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಪ್ರಸ್ತುತ ಅವರು ಇನ್ಸ್ಟಾಗ್ರಾಮ್ನಲ್ಲಿ ಕಾಂಗ್ರೆಸ್ ಅಧಿಕೃತ ಖಾತೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ಈ ಹೊಸ ಡಿಜಿಟಲ್ ಪಯಣ ಹಾಗೂ ಅವರ ಆತ್ಮಚರಿತ್ರೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ರಾಜಕೀಯ ಹಾಗೂ ಸಾಹಿತ್ಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.



