May 8, 2026
Friday, May 8, 2026
spot_img

200 ಪಂದ್ಯ, 200+ ವಿಕೆಟ್: ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಭುವನೇಶ್ವರ್‌ ಅಧಿಪತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 50ನೇ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಹಣಾಹಣಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 9 ರನ್​ಗಳ ಜಯ ಸಾಧಿಸುವ ಮೂಲಕ ಸತತ ಸೋಲುಗಳ ಸುಳಿಗೆ ಬ್ರೇಕ್ ಹಾಕಿತು. ಇತ್ತ ಆರ್​ಸಿಬಿ ತಂಡ ಸತತ ಎರಡನೇ ಸೋಲನ್ನು ಅನುಭವಿಸಬೇಕಾಯಿತು.

ಪಂದ್ಯದಲ್ಲಿ ಆರ್​ಸಿಬಿ ಸೋತರೂ, ತಂಡದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಪಾಲಿಗೆ ಇದು ಸ್ಮರಣೀಯ ದಿನವಾಗಿತ್ತು. ಈ ಪಂದ್ಯದ ಮೂಲಕ ಭುವಿ ತಮ್ಮ ಐಪಿಎಲ್ ವೃತ್ತಿಜೀವನದ 200ನೇ ಪಂದ್ಯ ಪೂರೈಸಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ವೇಗದ ಬೌಲರ್ ಎಂಬ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಯಾವುದೇ ವೇಗದ ಬೌಲರ್ 190 ಪಂದ್ಯಗಳ ಗಡಿಯನ್ನೂ ದಾಟದಿರುವುದು ಭುವಿ ಅವರ ಸುದೀರ್ಘ ವೃತ್ತಿಜೀವನಕ್ಕೆ ಸಾಕ್ಷಿಯಾಗಿದೆ.

2011 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ಮೂಲಕ ಐಪಿಎಲ್ ಪ್ರವೇಶಿಸಿದ ಭುವನೇಶ್ವರ್ ಕುಮಾರ್, ನಂತರ ಸುದೀರ್ಘ ಕಾಲ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿ ಯಶಸ್ಸು ಕಂಡಿದ್ದರು. ಪ್ರಸ್ತುತ ಕಳೆದ ಸೀಸನ್‌ನಿಂದ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿರುವ ಅವರು, ತಂಡಕ್ಕೆ ಭದ್ರ ಬುನಾದಿ ಒದಗಿಸುತ್ತಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಯೂ ಭುವಿಯವರದ್ದು. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಾಹಲ್ ಈ ಸಾಧನೆ ಮಾಡಿದ್ದರೆ, ಪೇಸ್ ವಿಭಾಗದಲ್ಲಿ ಭುವಿ ಕಿಂಗ್ ಆಗಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 2016 ಮತ್ತು 2017ರಲ್ಲಿ ಸತತ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಬೌಲರ್ ಎಂಬ ದಾಖಲೆ ಹೊಂದಿರುವ ಭುವನೇಶ್ವರ್, ಈ ಬಾರಿಯೂ (2026) 17 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ದುರದೃಷ್ಟವಶಾತ್ ತಮ್ಮ 200ನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯಲು ವಿಫಲರಾದರು. 4 ಓವರ್‌ಗಳಲ್ಲಿ 34 ರನ್ ನೀಡಿದರೂ ವಿಕೆಟ್ ಖಾತೆಗೆ ಸೇರಲಿಲ್ಲ. ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೈಚೆಲ್ಲಿದ ಕಾರಣ ಎರಡು ವಿಕೆಟ್ ಪಡೆಯುವ ಸುವರ್ಣಾವಕಾಶ ಅವರ ಕೈತಪ್ಪಿತು. ತಂಡಕ್ಕೆ ಗೆಲುವು ಮತ್ತು ವೈಯಕ್ತಿಕ ವಿಕೆಟ್ ಸಿಗದಿದ್ದರೂ, ಭುವಿ ಬರೆದ ಈ ದಾಖಲೆ ಮಾತ್ರ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುವಂತದ್ದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !