ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಎಲ್ಲಾ ತಂಡಗಳು ತಲಾ 10 ಪಂದ್ಯಗಳನ್ನು ಪೂರೈಸಿದ್ದು, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಟಾಪ್-2 ನಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶಗಳು ಸಿಗಲಿರುವುದರಿಂದ, ಈ ಸ್ಥಾನದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಸದ್ಯ ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ಆರ್ಸಿಬಿ, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಸಿಎಸ್ಕೆ ಈ ಲಿಸ್ಟ್‌ನಲ್ಲಿವೆ. ಟಾಪ್-2 ತಲುಪಲು ತಂಡಗಳಿಗೆ ಕನಿಷ್ಠ 18 ಅಂಕಗಳ ಅಗತ್ಯವಿದೆ.
ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಸದ್ಯ ಅಗ್ರಸ್ಥಾನದಲ್ಲಿರುವ ಹೈದರಾಬಾದ್, ಟಾಪ್-2 ತಲುಪುವ ಸನಿಹದಲ್ಲಿದೆ. ಉಳಿದಿರುವ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದರೆ ಇವರ ಸ್ಥಾನ ಭದ್ರವಾಗಲಿದೆ.
10 ಪಂದ್ಯಗಳಿಂದ 13 ಅಂಕ ಗಳಿಸಿರುವ ಪಂಜಾಬ್‌ಗೆ ಇನ್ನು 4 ಪಂದ್ಯಗಳು ಬಾಕಿ ಇವೆ. ಇದರಲ್ಲಿ 3 ಗೆದ್ದರೆ 19 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳಲ್ಲಿ ಇವರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ.
ಈ ಮೂರು ತಂಡಗಳ ಪರಿಸ್ಥಿತಿ ಒಂದೇ ರೀತಿ ಇದೆ. ತಲಾ 12 ಅಂಕಗಳನ್ನು ಹೊಂದಿರುವ ಈ ತಂಡಗಳು 18ರ ಗಡಿ ತಲುಪಲು ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.
ಸಿಎಸ್ಕೆ ಸದ್ಯ 10 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಇವರು ಟಾಪ್-2 ತಲುಪಬೇಕೆಂದರೆ ಉಳಿದಿರುವ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕು. ಕಳೆದ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿರುವ ಫಾರ್ಮ್ ನೋಡಿದರೆ, ಧೋನಿ ಪಡೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಲಕ್ಷಣಗಳು ಕಾಣುತ್ತಿವೆ.



