ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 52ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಅಮೋಘ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆದ ಶುಭಮನ್ ಗಿಲ್ ನೇತೃತ್ವದ ತಂಡ, 77 ರನ್‌ಗಳ ಬೃಹತ್ ಅಂತರದಿಂದ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಗುಜರಾತ್ ತಂಡ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದರೆ, ರಾಜಸ್ಥಾನ್ ರಾಯಲ್ಸ್ ಐದನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟಾನ್ಸ್ ಆರಂಭದಿಂದಲೇ ಅಬ್ಬರಿಸಿತು. ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ರಾಜಸ್ಥಾನದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 118 ರನ್‌ಗಳ ಭರ್ಜರಿ ಕಾಣಿಕೆ ನೀಡಿತು. ನಾಯಕ ಗಿಲ್ ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸಿದರೆ, ಸಾಯಿ ಸುದರ್ಶನ್ 36 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ (13) ಬೇಗನೆ ನಿರ್ಗಮಿಸಿದರೂ, ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಬಿರುಸಿನ ಆಟವಾಡಿದರು. ಕೇವಲ 20 ಎಸೆತಗಳಲ್ಲಿ 37 ರನ್ ಸಿಡಿಸಿದ ಸುಂದರ್ ಮತ್ತು ರಾಹುಲ್ ತೆವಾಟಿಯಾ ಅವರ ಅತಿವೇಗದ 14 ರನ್‌ಗಳ ನೆರವಿನಿಂದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 229 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ರಾಜಸ್ಥಾನ್ ರಾಯಲ್ಸ್ ಪರ ಬ್ರಿಜೇಶ್ ಶರ್ಮಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ರವೀಂದ್ರ ಜಡೇಜಾ ಮತ್ತು ಯಶ್ ರಾಜ್ ಪುಂಜಾ ತಲಾ ಒಂದು ವಿಕೆಟ್ ಪಡೆದರಾದರೂ, ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.
230 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ 36 ರನ್ ಸಿಡಿಸಿ ಭರವಸೆ ಮೂಡಿಸಿದರು. ಆದರೆ, ವೇಗಿ ಮೊಹಮ್ಮದ್ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ವೈಭವ್ ವಿಕೆಟ್ ಪತನದ ನಂತರ ರಾಜಸ್ಥಾನದ ಬ್ಯಾಟಿಂಗ್ ಲೈನ್-ಅಪ್ ಪತ್ತೆ ಇಲ್ಲದಂತಾಯಿತು. ನಾಯಕ ಯಶಸ್ವಿ ಜೈಸ್ವಾಲ್ (3), ಧ್ರುವ್ ಜುರೇಲ್ (24), ಮತ್ತು ಶಿಮ್ರಾನ್ ಹೆಟ್ಮಾಯರ್ (6) ಸಾಲು ಸಾಲಾಗಿ ಪೆವಿಲಿಯನ್ ಸೇರಿದರು. ಗುಜರಾತ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ರಾಜಸ್ಥಾನ್ ಅಂತಿಮವಾಗಿ 152 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.



