ಹೊಸದಿಗಂತ ಬೆಳಗಾವಿ:
ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಡಿ. ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮುಂಜಾನೆ ನಿಧನರಾದ ಸುಧಾಕರ್ ಅವರ ಸ್ಮರಣೆ ಮಾಡಿದ ಸಚಿವರು, ಅವರೊಬ್ಬ ಅಪರೂಪದ ವ್ಯಕ್ತಿತ್ವದ ನಾಯಕರಾಗಿದ್ದರು ಎಂದು ಬಣ್ಣಿಸಿದ್ದಾರೆ.
ಡಿ. ಸುಧಾಕರ್ ಅವರ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, “ಅತ್ಯಂತ ಶ್ರಮವಹಿಸಿ, ಕಡು ಕಷ್ಟದಿಂದ ರಾಜಕೀಯದಲ್ಲಿ ಮೇಲೆ ಬಂದಿದ್ದ ಸುಧಾಕರ್ ಅವರು ಸದಾ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಸಜ್ಜನಿಕೆಗೆ ಅವರು ಮತ್ತೊಂದು ಹೆಸರಾಗಿದ್ದರು. ಎಲ್ಲರನ್ನೂ ನಗುಮುಖದಿಂದ ಮಾತನಾಡಿಸುತ್ತಿದ್ದ ಅವರ ಸೌಮ್ಯ ಸ್ವಭಾವ ಎಲ್ಲರಿಗೂ ಮಾದರಿಯಾಗಿತ್ತು,” ಎಂದು ಮೆಲುಕು ಹಾಕಿದ್ದಾರೆ.
ಸಚಿವ ಸುಧಾಕರ್ ಅವರ ಸಾವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಆದ ಬಹುದೊಡ್ಡ ನಷ್ಟವಾಗಿದೆ. ಹಿರಿಯೂರು ಶಾಸಕರಾಗಿ ಮತ್ತು ಸಚಿವರಾಗಿ ಅವರು ಸಲ್ಲಿಸಿದ ಜನಪರ ಸೇವೆ ಅನನ್ಯವಾದುದು. ಅವರ ಅಕಾಲಿಕ ಅಗಲಿಕೆಯನ್ನು ಜೀರ್ಣಿಸಿಕೊಳ್ಳುವುದು ಕಷ್ಟಕರ ಎಂದು ಹೆಬ್ಬಾಳ್ಕರ್ ಕಂಬನಿ ಮಿಡಿದಿದ್ದಾರೆ.



