July 1, 2026
Wednesday, July 1, 2026
spot_img

‘ಡಿಎಂಕೆ ಫೈಲ್ಸ್’ ಭ್ರಷ್ಟಾಚಾರದ ಆರೋಪಗಳಿಗೆ ಇಂದಿಗೂ ಬದ್ಧ: ಕೇಸ್ ವಾಪಸ್ ಬೆನ್ನಲ್ಲೇ ಕೆ.ಅಣ್ಣಾಮಲೈ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ‘ಡಿಎಂಕೆ ಫೈಲ್ಸ್’ ಭ್ರಷ್ಟಾಚಾರದ ಆರೋಪಗಳ ಪ್ರಕರಣದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಹಿರಿಯ ಸಂಸದ ಟಿ.ಆರ್. ಬಾಲು ಹೂಡಿದ್ದ 100 ಕೋಟಿ ರೂ.ಗಳ ಭರ್ಜರಿ ಮಾನನಷ್ಟ ಮೊಕದ್ದಮೆಯನ್ನು ಅವರು ಸ್ವಯಂಪ್ರೇರಿತರಾಗಿ ನ್ಯಾಯಾಲಯದಿಂದ ವಾಪಸ್ ಪಡೆದಿದ್ದಾರೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ, “ಸತ್ಯಕ್ಕೆ ಸದಾ ಜಯ” ಎಂದು ಗುಡುಗಿದ್ದಾರೆ.

ಸ್ವತಃ ವಾದ ಮಾಡಿದ್ದ ಅಣ್ಣಾಮಲೈ

ಈ ಪ್ರಕರಣದ ವಿಚಾರಣೆಯ ಒಂದು ಹಂತದಲ್ಲಿ ಅಣ್ಣಾಮಲೈ ಅವರೇ ಸ್ವತಃ ನ್ಯಾಯಾಲಯದಲ್ಲಿ ತಮಗಾಗಿ ವಾದ ಮಂಡಿಸಿದ್ದರು ಮತ್ತು ಟಿ.ಆರ್. ಬಾಲು ಅವರನ್ನು ಖುದ್ದಾಗಿ ಕ್ರಾಸ್-ಎಕ್ಸಾಮಿನ್ ಮಾಡಿದ್ದರು. ವಿಚಾರಣೆಯ ಸಂದರ್ಭದಲ್ಲಿ ಟಿ.ಆರ್. ಬಾಲು ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲದೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ, ತಾವು ಕೂಡ ಬಾಲು ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಿದ್ದಾಗಿ ಅಣ್ಣಾಮಲೈ ಬಹಿರಂಗಪಡಿಸಿದ್ದಾರೆ. “ಪ್ರಕರಣವನ್ನು ಮುಂದುವರಿಸಬೇಕೋ ಬೇಡವೋ ಎಂಬುದು ಅವರ ನಿರ್ಧಾರ. ಆದರೆ ನಾನು ಡಿಎಂಕೆ ನಾಯಕರ ವಿರುದ್ಧ ಮಾಡಿದ್ದ ಪ್ರತಿಯೊಂದು ಭ್ರಷ್ಟಾಚಾರದ ಆರೋಪಕ್ಕೂ ಇಂದಿಗೂ ಬದ್ಧನಾಗಿದ್ದೇನೆ,” ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

 ಏನಿದು ‘ಡಿಎಂಕೆ ಫೈಲ್ಸ್’ ವಿವಾದ?

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತಮ್ಮ ‘ಡಿಎಂಕೆ ಫೈಲ್ಸ್’ ಅಭಿಯಾನದ ಮೂಲಕ ಸಂಸದ ಟಿ.ಆರ್. ಬಾಲು ಮತ್ತು ಅವರ ಕುಟುಂಬದ ಒಡೆತನದ ಸಾವಿರಾರು ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹಾಗೂ ಕಂಪನಿಗಳ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಟಿ.ಆರ್. ಬಾಲು, ಅಣ್ಣಾಮಲೈ ವಿರುದ್ಧ 100 ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ:

ಜುಲೈನಲ್ಲಿ ಅಣ್ಣಾಮಲೈ ಹೊಸ ಪಕ್ಷ ಉದಯ!

ಈ ಕಾನೂನು ಹೋರಾಟದಲ್ಲಿ ಗೆದ್ದು ಬೀಗಿರುವ ಅಣ್ಣಾಮಲೈ ತಮಿಳುನಾಡು ರಾಜಕಾರಣದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಆರಂಭಿಸಿದ್ದ “ವಿ ದ ಲೀಡರ್ಸ್” ಚಳವಳಿಯನ್ನು ಇದೇ ಜುಲೈ ತಿಂಗಳಿನಲ್ಲಿ ಅಧಿಕೃತ ರಾಜಕೀಯ ಪಕ್ಷವಾಗಿ ಪರಿವರ್ತಿಸುವುದಾಗಿ ಘೋಷಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿಯ ವಿರುದ್ಧ ಹೋರಾಡುವ ಗುರಿ ಹೊಂದಿರುವ ಈ ಪಕ್ಷಕ್ಕೆ 50 ಲಕ್ಷ ಸದಸ್ಯರನ್ನು ಸೇರಿಸುವ ಗುರಿ ಹೊಂದಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !