May 11, 2026
Monday, May 11, 2026
spot_img

RCBಗೆ ಗೆಲುವಿನ ಸಿಹಿ, ಮುಂಬೈ-ಲಕ್ನೋಗೆ ಪ್ಲೇಆಫ್ ಕಹಿ: ಅಂಕಪಟ್ಟಿಯಲ್ಲಿ ಬೆಂಗಳೂರೇ ಬಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಬೆನ್ನಲ್ಲೇ ಐಪಿಎಲ್ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದ್ದು, ಎರಡು ತಂಡಗಳ ಪ್ಲೇಆಫ್ ಕನಸು ನುಚ್ಚುನೂರಾಗಿದೆ.

ಛತ್ತೀಸ್‌ಗಢದ ರಾಯ್ಪುರ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ತಿಲಕ್ ವರ್ಮಾ (57) ಹಾಗೂ ನಮನ್ ಧೀರ್ (47) ಅವರ ಹೋರಾಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದು ಮಿಂಚಿದರು.

167 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಕೃನಾಲ್ ಪಾಂಡ್ಯ ಅವರ ಸ್ಫೋಟಕ 73 ರನ್‌ಗಳ ನೆರವಿನಿಂದ 20ನೇ ಓವರ್‌ನ ಕೊನೆಯ ಎಸೆತದಲ್ಲಿ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲುತ್ತಿದ್ದಂತೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದೇ ಹೊತ್ತಿಗೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ.

ಮುಂಬೈ ಇಂಡಿಯನ್ಸ್: ಈವರೆಗೆ ಆಡಿರುವ 11 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯಗಳಿಸಿರುವ ಮುಂಬೈ, ಗರಿಷ್ಠ 12 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯ. ಟಾಪ್-4 ತಂಡಗಳು ಈಗಾಗಲೇ 13ಕ್ಕಿಂತ ಹೆಚ್ಚು ಅಂಕ ಹೊಂದಿರುವುದರಿಂದ ಮುಂಬೈ ಹಾದಿ ಬಂದ್ ಆಗಿದೆ.

ಲಕ್ನೋ ಸೂಪರ್ ಜೈಂಟ್ಸ್: ಲಕ್ನೋ ಕೂಡ 11 ಪಂದ್ಯಗಳಲ್ಲಿ ಕೇವಲ 3 ಜಯ ದಾಖಲಿಸಿದ್ದು, ಉಳಿದ ಪಂದ್ಯ ಗೆದ್ದರೂ ಪ್ಲೇಆಫ್ ತಲುಪಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ.

ಈ ಗೆಲುವಿನ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ಮಾತ್ರವಲ್ಲದೆ, ಪ್ಲೇಆಫ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿಕೊಂಡಿದೆ. ಮುಂಬೈ ವಿರುದ್ಧದ ಈ ಗೆಲುವು ಬೆಂಗಳೂರು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !