ಹೊಸದಿಗಂತ ವರದಿ ಬೆಳಗಾವಿ:
ರೈತರ ಹೋರಾಟಕ್ಕೆ ಫಲ ದೊರೆತಿದ್ದು, ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸಲಾಗಿದೆ. ಸಕ್ಕರೆ ಕಾರ್ಖಾನೆಗಳು ತಕ್ಷಣವೇ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು. ಹೆಚ್ಚುವರಿ ದರ ಸೇರಿದಂತೆ ರೈತರ ಇತರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕವಾಗಿ ಚರ್ಚಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬುಧವಾರ ರಾತ್ರಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಮಾಲೀಕರು ಈಗಾಗಲೇ ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡಲು ಒಪ್ಪಿಗೆ ಸೂಚಿಸಿದ್ದು, ಕಾರ್ಖಾನೆ ಆರಂಭಿಸಲು ಸಿದ್ಧರಾಗಿದ್ದಾರೆ. ಹೀಗಾಗಿ ರೈತರು ನಿಗದಿಪಡಿಸಿದ ದರದಂತೆ ಕಬ್ಬು ಪೂರೈಕೆ ಮಾಡಿ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಹೆಚ್ಚುವರಿ ದರದ ಬೇಡಿಕೆಯನ್ನು ಸರ್ಕಾರದ ಮುಂದೆ ಪ್ರತ್ಯೇಕವಾಗಿ ಮಂಡಿಸಲು ಅವಕಾಶವಿದ್ದು, ಅಗತ್ಯವಿದ್ದಲ್ಲಿ ಈ ಕುರಿತು ಒಪ್ಪಂದವನ್ನೂ ಮಾಡಿಕೊಳ್ಳಬಹುದು ಎಂದರು.
ಕಿತ್ತೂರು, ಬೈಲಹೊಂಗಲ ಹಾಗೂ ಖಾನಾಪುರ ಭಾಗಗಳಲ್ಲಿ ಮಳೆ ಆಶ್ರಿತ ಕೃಷಿ ಮತ್ತು ನೀರಿನ ಅಭಾವದಿಂದ ರೈತರು ಸಂಕಷ್ಟ ಎದುರಿಸುತ್ತಿರುವುದು ಸರ್ಕಾರದ ಗಮನದಲ್ಲಿದೆ. ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಸಂಘಟನೆಗಳು ಪ್ರತಿಭಟನೆ ಹಾಗೂ ಜೈಲ್ ಭರೋ ಕಾರ್ಯಕ್ರಮಗಳನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿಕೊಂಡರು.
ಈಗಾಗಲೇ ಚೂನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರುಜೀ ಅವರು ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಕಾರ್ಖಾನೆಗಳನ್ನು ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕಾರ್ಖಾನೆಗಳು ಆರಂಭವಾದ ಬಳಿಕ ರೈತರ ಹೆಚ್ಚುವರಿ ಬೇಡಿಕೆಗಳ ಕುರಿತು ಪ್ರತ್ಯೇಕವಾಗಿ ಚರ್ಚಿಸಲು ಅವಕಾಶವಿದೆ ಎಂದು ಹೇಳಿದರು.
ಹೆಚ್ಚುವರಿ ಪ್ರೋತ್ಸಾಹಧನಕ್ಕೆ ಮುಂದುವರಿದ ಹೋರಾಟ
ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸಿರುವುದನ್ನು ಒಪ್ಪಿಕೊಂಡಿದ್ದರೂ, ರೈತರ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ರಾಜ್ಯ ಸರ್ಕಾರದಿಂದ ಪ್ರತಿ ಟನ್ ಕಬ್ಬಿಗೆ ₹1,000 ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ದರ (ಎಂಎಸ್ಪಿ) ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದುವರಿಯಲಿದೆ ಎಂದು ರೈತ ಮುಖಂಡ ರಾಘವೇಂದ್ರ ನಾಯಕ್ ಸ್ಪಷ್ಟಪಡಿಸಿದರು.
ಕಳೆದ ವರ್ಷ ಪ್ರತಿ ಟನ್ಗೆ ₹50 ನೀಡಲಾಗಿತ್ತು. ಆದರೆ ರೈತರ ನಿಜವಾದ ಬೇಡಿಕೆ ₹1,000 ಆಗಿದೆ. ಈ ಮೊತ್ತವನ್ನು ನಿರಂತರವಾಗಿ ನೀಡಬೇಕು. ಎಂಎಸ್ಪಿ ಹೆಚ್ಚಳದಿಂದ ದೊರೆಯುವ ಹೆಚ್ಚುವರಿ ಆದಾಯವನ್ನು ಶೇ.70ರಷ್ಟು ರೈತರಿಗೆ ಹಾಗೂ ಶೇ.30ರಷ್ಟು ಸಕ್ಕರೆ ಕಾರ್ಖಾನೆಗಳಿಗೆ ಹಂಚುವ ಸೂತ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಉಪ ಉತ್ಪನ್ನಗಳಿಂದಲೂ ರೈತರಿಗೆ ಹೆಚ್ಚುವರಿ ಲಾಭ ದೊರೆಯುವ ವ್ಯವಸ್ಥೆಯಾಗಬೇಕು. ಸದ್ಯದ ₹3,600 ದರಕ್ಕೆ ಒಪ್ಪಿಗೆ ನೀಡಿರುವುದು ಕಾರ್ಖಾನೆಗಳ ಕಬ್ಬು ನುರಿಸುವ ಪ್ರಕ್ರಿಯೆ ಆರಂಭವಾಗಲಿ ಎಂಬ ಉದ್ದೇಶವಿದೆ ಅದಕ್ಕೆ ನಾವುಗಳು ಒಪ್ಪಿಕೊಂಡಿದ್ದೇವೆ ಹೊರತು, ರೈತರ ಎಲ್ಲ ಬೇಡಿಕೆಗಳು ಈಡೇರಿವೆ ಎಂದಲ್ಲ ಎಂದರು.
ಕಿತ್ತೂರು, ಖಾನಾಪುರ, ರಾಮದುರ್ಗ ಸೇರಿದಂತೆ ವಿವಿಧ ಭಾಗಗಳ ರೈತರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ರೈತರ ಸಂಕಷ್ಟವನ್ನು ಸರ್ಕಾರಗಳು ಮತ್ತು ಕಾರ್ಖಾನೆ ಮಾಲೀಕರು ಅರ್ಥಮಾಡಿಕೊಳ್ಳಬೇಕು. ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಿ ಎಂಎಸ್ಪಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ₹1,000 ಪ್ರೋತ್ಸಾಹಧನದ ಬೇಡಿಕೆ ಈಡೇರುವವರೆಗೆ ಹೋರಾಟ ನಿರಂತರವಾಗಿರಲಿದೆ ಎಂದು ಆಗ್ರಹಿಸಿದರು.



