ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ವಿದೇಶಿ ನೆಲದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷವನ್ನು ‘ಊಸರವಳ್ಳಿ’ಗೆ ಹೋಲಿಸಿ ಲೇವಡಿ ಮಾಡಿದ್ದಾರೆ.
ತಮಿಳುನಾಡಿನ ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಅಣ್ಣಾಮಲೈ, “ಇಷ್ಟು ವರ್ಷಗಳ ಕಾಲ ಡಿಎಂಕೆ ಭಾಷೆಯಲ್ಲೇ ಮಾತನಾಡುತ್ತಿದ್ದ ಕಾಂಗ್ರೆಸ್, ಈಗ ನಟ ವಿಜಯ್ ಅವರ ಹೊಸ ಪಕ್ಷದತ್ತ ವಾಲುತ್ತಿದೆ. ಈ ವೇಗವನ್ನು ನೋಡಿದರೆ ಊಸರವಳ್ಳಿಯೂ ಕೂಡ ಇಷ್ಟು ಬೇಗ ಬಣ್ಣ ಬದಲಿಸಲು ಸಾಧ್ಯವಿಲ್ಲ ಅನಿಸುತ್ತದೆ” ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ತನ್ನ ಸ್ವಂತ ಅಸ್ತಿತ್ವವನ್ನು ಮರೆತು, ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳ ಮೇಲೆ ಸವಾರಿ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಕಾಂಗ್ರೆಸ್ ಸಂಸದರು ಹೊಂದಿರುವ ನಿಲುವನ್ನು ಅಣ್ಣಾಮಲೈ ಪ್ರಶ್ನಿಸಿದರು. “ದಕ್ಷಿಣದ ಯಾವುದಾದರೂ ಒಂದು ರಾಜ್ಯದಲ್ಲಿ ಗೆದ್ದ ತಕ್ಷಣ, ದಕ್ಷಿಣ ಭಾರತವೇ ಬೇರೆ ಎಂಬ ಕೂಗು ಕಾಂಗ್ರೆಸ್ ಪಾಳಯದಿಂದ ಕೇಳಿಬರುತ್ತದೆ. ಶಶಿ ತರೂರ್ ಅವರಂತಹ ಹಿರಿಯರು ಇಂತಹ ವಿಭಜಕ ಮನಸ್ಥಿತಿಯ ಸಂಸದರಿಗೆ ಆಪ್ತರಾಗಿರುವುದು ವಿಷಾದನೀಯ” ಎಂದರು. ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವವಿರುವ ತರೂರ್ ಅವರು ಕಾಂಗ್ರೆಸ್ ಭಾಷೆ ಮಾತನಾಡಲು ಶುರು ಮಾಡಿದರೆ ಅನಗತ್ಯ ವಿವಾದಗಳು ಸೃಷ್ಟಿಯಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಅಣ್ಣಾಮಲೈ, “ಮತದಾರರ ಪಟ್ಟಿಯಿಂದ ಲಕ್ಷಾಂತರ ಜನರ ಹೆಸರನ್ನು ತೆಗೆದುಹಾಕಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸೋಲಿನ ಭೀತಿಯಿಂದ ಕಾಂಗ್ರೆಸ್ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ” ಎಂದು ಸ್ಪಷ್ಟಪಡಿಸಿದರು. ಕೇರಳ ಕಾಂಗ್ರೆಸ್‌ನಲ್ಲಿರುವ ಆಂತರಿಕ ಗೊಂದಲ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯ ಗೊಂದಲವನ್ನು ಮುಚ್ಚಿಡಲು ಶಶಿ ತರೂರ್ ಅಂತರಾಷ್ಟ್ರೀಯ ವೇದಿಕೆಯಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.



