ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆ ಮತ್ತು ಆರ್ಥಿಕ ಸವಾಲುಗಳ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆನ್ನಲಾದ ಸಲಹೆಗಳನ್ನು “ವೈಫಲ್ಯದ ಪುರಾವೆಗಳು” ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
“ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ” ಎಂದು ನೇರವಾಗಿ ಕಿಡಿಕಾರಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಜನರಿಗೆ ನೀಡುತ್ತಿರುವ ಸಲಹೆಗಳು ಅವರ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ತಂತ್ರ ಎಂದು ಆರೋಪಿಸಿದ್ದಾರೆ.
ಕಳೆದ 12 ವರ್ಷಗಳ ಆಡಳಿತದಲ್ಲಿ ದೇಶವು ಎದುರಿಸುತ್ತಿರುವ ಸಂಕಷ್ಟಗಳಿಗೆ ಜನರನ್ನೇ ಹೊಣೆ ಮಾಡಲಾಗುತ್ತಿದೆ. ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಮಾಡಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂಬಿತ್ಯಾದಿ ಸಲಹೆಗಳು ‘ಧರ್ಮೋಪದೇಶ’ದಂತೆ ಕಾಣುತ್ತಿವೆಯೇ ಹೊರತು ಪರಿಹಾರಗಳಲ್ಲ. ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸಿ ಹಾಗೂ ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳುವುದು ಸರ್ಕಾರದ ಅಸಹಾಯಕತೆಯನ್ನು ತೋರಿಸುತ್ತದೆ.
ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಬದಲು, ಪ್ರಧಾನಿ ಅವರು ಸಾರ್ವಜನಿಕರ ಮೇಲೆ ಜವಾಬ್ದಾರಿಯನ್ನು ವರ್ಗಾಯಿಸುತ್ತಿದ್ದಾರೆ. ಪ್ರತಿ ಬಾರಿಯೂ ಸಮಸ್ಯೆಗಳು ಎದುರಾದಾಗ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಸಾಮಾನ್ಯ ಜನರ ಜೀವನಶೈಲಿಯನ್ನೇ ಬದಲಿಸಿಕೊಳ್ಳಲು ಹೇಳುವುದು ಸರಿಯಲ್ಲ ಎಂಬುದು ರಾಹುಲ್ ಗಾಂಧಿ ಅವರ ಪ್ರಮುಖ ವಾದವಾಗಿದೆ.



