May 11, 2026
Monday, May 11, 2026
spot_img

MI ವಿರುದ್ಧ ಅಸಾಧ್ಯ ಗೆಲುವು ತಂದುಕೊಟ್ಟ ಭುವಿಯ ಆ ಒಂದು ಸಿಕ್ಸರ್ ಕಿಮ್ಮತ್ತು ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ಸೃಷ್ಟಿಸಿದ ಈ ದಾಖಲೆ ಮಾತ್ರ ಅತ್ಯಂತ ಅಪರೂಪದ್ದು. ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭುವಿ ಸಿಡಿಸಿದ ಒಂದು ಸಿಕ್ಸರ್ ಈಗ ಇಡೀ ಐಪಿಎಲ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.

ಸಾಮಾನ್ಯವಾಗಿ ಬೌಲಿಂಗ್‌ನಲ್ಲಿ ಮಿಂಚುವ ಭುವನೇಶ್ವರ್ ಕುಮಾರ್, ಬ್ಯಾಟಿಂಗ್‌ನಲ್ಲಿ ಸಿಕ್ಸರ್ ಸಿಡಿಸುವುದು ಬಹಳ ವಿರಳ. ಅವರು ಐಪಿಎಲ್‌ನಲ್ಲಿ ತಮ್ಮ ಮೂರನೇ ಸಿಕ್ಸರ್ ಬಾರಿಸಿದ್ದು 2016ರಲ್ಲಿ. ಅಂದಿನಿಂದ ಇಂದಿನವರೆಗೆ ಅಂದರೆ ಬರೊಬ್ಬರಿ 10 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಮೇ 10, 2026ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಭುವಿ ಸಿಕ್ಸರ್ ಅಟ್ಟಿದ್ದಾರೆ. ಈ ಮೂಲಕ 2016ರಿಂದ 2026ರ ನಡುವಿನ ಹತ್ತು ವರ್ಷಗಳ ಅಂತರದಲ್ಲಿ ಭುವಿ ಬ್ಯಾಟ್‌ನಿಂದ ಸಿಡಿದ ಮೊದಲ ಸಿಕ್ಸ್ ಇದಾಗಿದೆ.

ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ ಗೆಲ್ಲಲು ಕಠಿಣ ಗುರಿಯಿತ್ತು. ಅಂತಿಮ 3 ಎಸೆತಗಳಲ್ಲಿ 9 ರನ್ ಬೇಕಿದ್ದಾಗ ಒತ್ತಡದ ನಡುವೆಯೂ ಭುವಿ ಸಿಡಿಸಿದ ಸಿಕ್ಸರ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಅಂಕಿಅಂಶಗಳ ಪ್ರಕಾರ, ಈ ಸಿಕ್ಸರ್ ಬಾರಿಸುವ ಮುನ್ನ ಆರ್‌ಸಿಬಿಯ ಗೆಲುವಿನ ಸಾಧ್ಯತೆ 51% ಇತ್ತು, ಆದರೆ ಆ ಒಂದೇ ಹೊಡೆತ ತಂಡದ ಗೆಲುವಿನ ಅವಕಾಶವನ್ನು 99% ಗೆ ಏರಿಸಿತು. ವಿಶ್ಲೇಷಣಾತ್ಮಕವಾಗಿ ಈ ಸಿಕ್ಸರ್‌ನ ಮೌಲ್ಯ ಅಂದಾಜು ₹99 ಲಕ್ಷ ಎಂದು ಅಂದಾಜಿಸಲಾಗಿದ್ದು, ದಶಕದ ನಂತರ ಬಂದ ಸಿಕ್ಸರ್ ತಂಡಕ್ಕೆ ಸಂಜೀವಿನಿಯಾಯಿತು.

ಬ್ಯಾಟಿಂಗ್‌ಗೂ ಮುನ್ನ ಬೌಲಿಂಗ್‌ನಲ್ಲಿ ಮುಂಬೈ ಬ್ಯಾಟರ್‌ಗಳನ್ನು ಭುವಿ ನಡುಗಿಸಿದ್ದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 23 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಪ್ರಸ್ತುತ ಟೂರ್ನಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಪಡೆದಿರುವ ಭುವನೇಶ್ವರ್ ಕುಮಾರ್, ‘ಪರ್ಪಲ್ ಕ್ಯಾಪ್’ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಿನಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಈ ಪಂದ್ಯ ಭುವಿಯ ಆಲ್‌ರೌಂಡ್ ಪ್ರದರ್ಶನದಿಂದಾಗಿ ಹಬ್ಬದೂಟ ಬಡಿಸಿದಂತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !