May 11, 2026
Monday, May 11, 2026
spot_img

ನಿಷ್ಠಾವಂತ ಸ್ವಯಂಸೇವಕಗೆ ಪ್ರಧಾನಿಯ ನಮನ: ಉಡುಪಿಯ ಗುಜ್ಜಾಡಿ ಸಹೋದರರೊಂದಿಗೆ ಮೋದಿ ‘ಪರಿವಾರ ಮಿಲನ’

ಹೊಸ ದಿಗಂತ ವರದಿ,​ಉಡುಪಿ:

ರಾಜಕೀಯದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಳಮಟ್ಟದ ಕಾರ್ಯಕರ್ತರನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾರೆ ಎಂಬುದಕ್ಕೆ ಸೋಮವಾರ ಬೆಂಗಳೂರಿನಲ್ಲಿ ನಡೆದ ಒಂದು ಅಪರೂಪದ ಭೇಟಿ ಸಾಕ್ಷಿಯಾಯಿತು.

ಉಡುಪಿಯ ಹಿರಿಯ ಸಂಘ ಸ್ವಯಂಸೇವಕ, ದಿ. ಗುಜ್ಜಾಡಿ ನರಸಿಂಹ ನಾಯಕ್ ಅವರ ಆರು ಮಂದಿ ಸುಪುತ್ರರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿಯವರು, ಅದನ್ನು ಕೇವಲ ಔಪಚಾರಿಕ ಭೇಟಿಯಾಗಿಸದೆ ಒಂದು ಮಧುರ ‘ಪರಿವಾರ ಮಿಲನ’ವನ್ನಾಗಿ ಬದಲಿಸಿದರು.

​“ಬನ್ನಿ ನನ್ನ ಸಂಘ ಪರಿವಾರವೇ..!”
​ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಸಂಸ್ಥಾಪಕರಾದ ದಿ. ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸಿದ್ಧಪಡಿಸಲಾದ ಅವರ ಜೀವನಚರಿತ್ರೆಯ ಸ್ಮರಣ ಗ್ರಂಥವನ್ನು ಅರ್ಪಿಸಲು ‘ಸ್ವರ್ಣ ಸಹೋದರರು’ ಆಗಮಿಸಿದಾಗ, ಮೋದಿ ಅವರು “ಆಯಿಯೇ ಮೇರಾ ಸಂಘ ಪರಿವಾರ್” (ಬನ್ನಿ ನನ್ನ ಸಂಘ ಪರಿವಾರವೇ) ಎಂದು ಪ್ರೀತಿಯಿಂದ ಸ್ವಾಗತಿಸಿದರು.

ಪ್ರಧಾನಿಯವರ ಈ ಸಹಜ ಸುಂದರ ಮಾತುಗಳಿಂದ ಕುಟುಂಬದ ಸದಸ್ಯರಲ್ಲಿದ್ದ ಆತಂಕವೆಲ್ಲಾ ಕಳೆದುಹೋಗಿ, ಮನೆಯ ಹಿರಿಯ ಸದಸ್ಯನ ಸಮ್ಮುಖದಲ್ಲಿದ್ದೇವೆ ಎಂಬ ಭಾವ ಮೂಡಿತು.

ಈ ಭೇಟಿಯ ಸಂದರ್ಭದಲ್ಲಿ ಕುಟುಂಬಸ್ಥರು ಭಾವುಕರಾದಾಗ, ಮೋದಿ ಅವರು “ಆಪ್ ಸಬ್ ಭಾವುಕ್ ಹೋ ಗಯೇ” (ನೀವೆಲ್ಲರೂ ಭಾವುಕರಾಗಿದ್ದೀರಿ) ಎಂದು ಸಾಂತ್ವನ ನೀಡಿದ ರೀತಿ ಅವರ ಸರಳತೆಗೆ ಹಿಡಿದ ಕೈಗನ್ನಡಿಯಾಗಿತ್ತು.

​ದೈವಿಕ ಪ್ರಸಾದ ಹಾಗೂ ದೇಶಸೇವೆಯ ಕೊಡುಗೆ
​ಭೇಟಿಯ ವೇಳೆ ಕುಟುಂಬದ ಹಿರಿಯರಾದ ಪ್ರಭಾಕರ ನಾಯಕ್ ದಂಪತಿ ಕೊಲ್ಲೂರು ಮೂಕಾಂಬಿಕಾ ದೇವಿಯ ಪ್ರಸಾದ ಹಾಗೂ ಉಡುಪಿಯ ಮಲ್ಲಿಗೆ ಹಾರವನ್ನು ಅರ್ಪಿಸಿದರು. ಮಾಧವ ನಾಯಕ್ ಅವರು ಉಡುಪಿ ಶ್ರೀಕೃಷ್ಣ ಮಠ ಹಾಗೂ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಪ್ರಸಾದವನ್ನು ನೀಡಿದಾಗ ಪ್ರಧಾನಿಯವರು ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸಿದರು. ತಂದೆಯವರ ಜೀವನಗಾಥೆಯ ಪುಸ್ತಕವನ್ನು ರಾಮದಾಸ ನಾಯಕ್ ದಂಪತಿ ಹಸ್ತಾಂತರಿಸಿದಾಗ ಪ್ರಧಾನಿಯವರು ಅದನ್ನು ಆಸಕ್ತಿಯಿಂದ ವೀಕ್ಷಿಸಿದರು.

ಗೋಪಾಲಕೃಷ್ಣ ನಾಯಕ್ ಅವರು ಬೆಳ್ಳಿಯ ಸ್ಮರಣಿಕೆ ನೀಡಿದರೆ, ರಾಜೇಶ್ ನಾಯಕ್ ಅವರು ಅಯೋಧ್ಯೆ ಮತ್ತು ತಿರುಪತಿಗೆ ತಯಾರಿಸಿದ ಆಭರಣಗಳ ವಿವರಗಳನ್ನು ಹಂಚಿಕೊಂಡರು. ಇದೇ ವೇಳೆ ರಘುವೀರ ನಾಯಕ್ ದಂಪತಿ ‘ಪಿಎಂ ಕೇರ್ಸ್’ ನಿಧಿಗೆ 1 ಕೋಟಿ ರೂಪಾಯಿಗಳ ಬೃಹತ್ ದೇಣಿಗೆಯನ್ನು ಸಮರ್ಪಿಸಿದರು. “ಇದು ದೇಶದ ಕೆಲಸಕ್ಕಾಗಿ ಸಮರ್ಪಿತವಾಗಲಿದೆ” ಎಂದು ಮೋದಿ ಈ ಕೊಡುಗೆಯನ್ನು ಸ್ಮರಿಸಿದರು.

​ಉಡುಪಿಗೆ ಭರವಸೆಯ ಆಮಂತ್ರಣ
​ಜುಲೈ 26, 2026 ರಂದು ಉಡುಪಿಯಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸುವಂತೆ ಸಹೋದರರು ಆಹ್ವಾನ ನೀಡಿದರು.

ಇದು ಕೇವಲ ರಾಜಕೀಯ ಭೇಟಿಯಲ್ಲ, 67 ವರ್ಷಗಳ ಕಾಲ ತಮ್ಮ ತಂದೆಯವರು ರಾಷ್ಟ್ರಕ್ಕಾಗಿ ಮಾಡಿದ ತಪಸ್ಸಿಗೆ ಮೋದಿ ಅವರ ಮೂಲಕ ದೊರೆತ ಪರಮ ಗೌರವ ಎಂದು ಗುಜ್ಜಾಡಿ ಸಹೋದರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿ. ನರಸಿಂಹ ನಾಯಕ್ ಪರಿಚಯ
ಸೆ. 22 ರ 1942ರಲ್ಲಿ ಉಡುಪಿಯಲ್ಲಿ ಸಂಘದ ಮೊದಲ ಶಾಖೆ ಆರಂಭವಾದ ಕೇವಲ ಮೂರು ತಿಂಗಳಲ್ಲೇ ಸ್ವಯಂಸೇವಕರಾಗಿ ಸೇರಿದ್ದ ನರಸಿಂಹ ನಾಯಕ್ ಅವರು, ಸತತ 67 ವರ್ಷಗಳ ಕಾಲ ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ಜನಸಂಘ/ಬಿಜೆಪಿಯ ಮೂಲಕ ರಾಷ್ಟ್ರವ್ರತವನ್ನು ಪಾಲಿಸಿದವರು. ಅಲ್ಲದೇ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಸಂಸ್ಥಾಪಿಸಿ ಜನಮನ್ನಣೆ ಪಡೆದಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !