ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಭಾರತದಲ್ಲಿ ತೈಲ ಸರಬರಾಜು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.
ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಪಶ್ಚಿಮ ಏಷ್ಯಾ ಕುರಿತ ಅನೌಪಚಾರಿಕ ಸಚಿವರ ಗುಂಪು (IGoM) ಸಭೆ ನಡೆಸಿದರು. ಸಭೆಯಲ್ಲಿ ಇಂಧನ ಭದ್ರತೆ, ಪೂರೈಕೆ ಮತ್ತು ಅಗತ್ಯ ವಸ್ತುಗಳ ಮೇಲೆ ಉಂಟು ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ದೇಶದಲ್ಲಿ ಇಂಧನದ ಕೊರತೆ ಇಲ್ಲ. ಹೀಗಾಗಿ ನಾಗರಿಕರು ಭಯಪಡುವ ಅಗತ್ಯವಿಲ್ಲ ಅಥವಾ ಅತಿಯಾಗಿ ಇಂಧನ ಖರೀದಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ 60 ದಿನಗಳಿಗೆ ಅಗತ್ಯವಿರುವಷ್ಟು ಕಚ್ಚಾ ತೈಲ, 60 ದಿನಗಳ ನೈಸರ್ಗಿಕ ಅನಿಲ ಹಾಗೂ 45 ದಿನಗಳಿಗೆ ಬೇಕಾಗುವಷ್ಟು ಎಲ್‌ಪಿಜಿ ರೋಲಿಂಗ್ ಸ್ಟಾಕ್ ಹೊಂದಿದೆ ಎಂದು ಸಚಿವರ ತಂಡ ಸ್ಪಷ್ಟಪಡಿಸಿದೆ. ಈ ಮೂಲಕ ದೇಶದಲ್ಲಿ ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ ಎಂದು ತಿಳಿಸಿದೆ.
ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ದೇಶವಾಗಿದ್ದು, ಜೊತೆಗೆ ನಾಲ್ಕನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪನ್ನ ರಫ್ತುದಾರವಾಗಿದೆ. ಹೀಗಾಗಿ ದೇಶೀಯ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದೆ ಎಂದು ಸಚಿವರ ತಂಡ ತಿಳಿಸಿದೆ.
ಇದೇ ವೇಳೆ, ಭಾರತದ ವಿದೇಶಿ ವಿನಿಮಯ ಸಂಗ್ರಹವು 703 ಬಿಲಿಯನ್ ಅಮೆರಿಕನ್ ಡಾಲರ್ ಮಟ್ಟದಲ್ಲಿದ್ದು, ಇದು ಆರ್ಥಿಕ ಸ್ಥಿರತೆಗೆ ಬಲ ತೋರಿಸುತ್ತದೆ ಎಂದು ಹೇಳಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದಿನಕ್ಕೆ 1,000 ಕೋಟಿ ನಷ್ಟ ಅನುಭವಿಸುತ್ತಿವೆ. 2026ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಕಡಿಮೆ ಚೇತರಿಕೆ 2 ಲಕ್ಷ ಕೋಟಿ ಮಟ್ಟ ತಲುಪಿದೆ. ಆದರೆ ಸರ್ಕಾರ ಮತ್ತು ಕಂಪನಿಗಳು ಈ ನಷ್ಟದ ಭಾರವನ್ನು ಜನತೆಯ ಮೇಲೆ ಹಾಕದೆ ತಾವೇ ಹೊತ್ತುಕೊಳ್ಳುತ್ತಿದೆ ಎಂದು IGoM ಹೇಳಿಕೆ ನೀಡಿದೆ.
ಈ ವೇಳೆ ಕೇಂದ್ರ ಸರ್ಕಾರವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ವಿಮಾನಯಾನ ವಲಯಕ್ಕೆ ನೆರವಾಗಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ 5.0 ಅನ್ನು ಅನುಮೋದಿಸಿದೆ. ಈ ಮೂಲಕ 2,55,000 ಕೋಟಿ ಹೆಚ್ಚುವರಿ ಸಾಲದ ಹರಿವನ್ನು ಒದಗಿಸುವ ಗುರಿ ಹೊಂದಿದ್ದು, MSMEಗಳಿಗೆ 100% ಕ್ರೆಡಿಟ್ ಗ್ಯಾರಂಟಿ ಹಾಗೂ ಇತರೆ ವಲಯಗಳಿಗೆ 90% ಗ್ಯಾರಂಟಿ ಸೌಲಭ್ಯ ನೀಡಲಾಗುತ್ತದೆ.



