ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲದ ಬೇರುಗಳು ದಿನದಿಂದ ದಿನಕ್ಕೆ ಆಳವಾಗಿ ಇಳಿಯುತ್ತಿರುವುದು ಆತಂಕ ಮೂಡಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ, ನಗರದ ಮುಲ್ಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಹೈಡೋವಿಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾದ 21 ವರ್ಷದ ಸುಹಾನ ಬಂಧಿತ ಆರೋಪಿ. ಈಕೆ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ.
ನಿನ್ನೆ ಮಂಗಳವಾರ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯ ಬಳಿ ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪಣಂಬೂರು ಎಸಿಪಿ ಮತ್ತು ಮುಲ್ಕಿ ಪೊಲೀಸರು ಜಂಟಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಬಂಧಿಸಿ, ಸದ್ಯ ಆಕೆಯ ಬಳಿ ಇದ್ದ ಸುಮಾರು 1ಕೆಜಿ 42ಗ್ರಾಂ ಗಾಂಜಾ ಮತ್ತು ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನಾ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಬೇರೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಆರೋಪಿ ಯುವತಿಯ ವಿರುದ್ಧಈಗಾಗಲೇ ಕಾವೂರು ಪೊಲೀಸ್ ಠಾಣೆ ಯಲ್ಲಿ NDPS Act ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಸ್ಟಮ್ ನಲ್ಲೂ NDPS Act ಅಡಿ ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



