ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯೊಳಗೆ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್‌ವೊಂದು ಸ್ಫೋಟಗೊಂಡ ಪರಿಣಾಮ 65 ವರ್ಷದ ಆಟೋ ಚಾಲಕ ಸಜೀವ ದಹನವಾಗಿರುವ ಭೀಕರ ಘಟನೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಫಿ ಟೌನ್‌ನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಮರ್ಫಿ ಟೌನ್‌ನ 1ನೇ ಸ್ಕ್ವೇರ್ ನಿವಾಸಿ ಲೂರ್ಡ್ ನಾಥನ್ ಮೃತ ದುರ್ದೈವಿ. ಇವರು ತಮ್ಮ ಮನೆಯ ನೆಲ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮಗ ಫ್ರಾಂಕ್ ಮತ್ತು ಅವರ ಪತ್ನಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ಮುಂಜಾನೆ ಸುಮಾರು 3 ಗಂಟೆಗೆ ನೆಲ ಮಹಡಿಯಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿ ಅವರು ಎಚ್ಚರಗೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ಫ್ರಾಂಕ್ ತಕ್ಷಣ ನೆಲ ಮಹಡಿಗೆ ಧಾವಿಸಿ, ಬಾಗಿಲು ಮುರಿದು ಒಳನುಗ್ಗಿದ್ದಾರೆ. ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ನಾಥನ್‌ನನ್ನು ಹೊರಗೆ ಕರೆತಂದು ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಾಥನ್ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಯೊಳಗೆ ಎಲೆಕ್ಟ್ರಿಕ್ ಬೈಕ್‌ನ್ನು ಚಾರ್ಜ್‌ಗೆ ಇಟ್ಟು ಹತ್ತಿರದಲ್ಲೇ ಮಲಗಿದ್ದರು. ಈ ವೇಳೆ ವಾಹನದ ಬ್ಯಾಟರಿ ಅತಿಯಾಗಿ ಕಾಯ್ದು ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ವಿಧಿವಿಜ್ಞಾನ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಫೋಟಕ್ಕೆ ನಿಖರ ಕಾರಣ ಏನೆಂಬುದನ್ನು ಅವರು ಪತ್ತೆಹಚ್ಚಲಿದ್ದಾರೆ.
ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಘಟನಾ ಸಂಬಂಧ ಹಲಸೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



