May 13, 2026
Wednesday, May 13, 2026
spot_img

ನಂದಿಗ್ರಾಮಕ್ಕೆ ಗುಡ್‌ಬೈ, ಭವಾನಿಪುರಕ್ಕೆ ಜೈ: ಸಿಎಂ ಸುವೇಂದು ಮಹತ್ವದ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುವೇಂದು ಅಧಿಕಾರಿ, ತಾವು ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ಭವಾನಿಪುರ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರೊಂದಿಗೆ ಅವರು ತಮ್ಮ ಹಳೆಯ ಕ್ಷೇತ್ರವಾದ ನಂದಿಗ್ರಾಮದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿಧಾನಸಭೆಗೆ ಆಗಮಿಸಿದ ಸುವೇಂದು ಅಧಿಕಾರಿ, ಅತ್ಯಂತ ಭಕ್ತಿಪೂರ್ವಕವಾಗಿ ಸದನವನ್ನು ಪ್ರವೇಶಿಸಿದರು. ವಿಧಾನಸಭೆಯ ಪ್ರವೇಶದ್ವಾರದ ಬಳಿ ಮಂಡಿಯೂರಿ, ಹಣೆಯನ್ನು ನೆಲಕ್ಕೆ ಮುಟ್ಟಿಸಿ ನಮಸ್ಕರಿಸುವ ಮೂಲಕ ಪ್ರಜಾಪ್ರಭುತ್ವದ ದೇಗುಲಕ್ಕೆ ಗೌರವ ಸಲ್ಲಿಸಿದರು. ತದನಂತರ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಭವಾನಿಪುರ ಕ್ಷೇತ್ರದ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿದ್ದರು. ನಿಯಮದ ಪ್ರಕಾರ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದರಿಂದ, ಅವರು ಭವಾನಿಪುರವನ್ನು ಆರಿಸಿಕೊಂಡಿದ್ದಾರೆ.

ನಂದಿಗ್ರಾಮದ ಕುರಿತು ಮಾತನಾಡಿದ ಅವರು, “ಉಪಚುನಾವಣೆಯಲ್ಲಿ ನಂದಿಗ್ರಾಮದಿಂದ ಹೊಸ ಶಾಸಕರು ಆಯ್ಕೆಯಾಗಲಿದ್ದಾರೆ. ಆದರೆ ನಂದಿಗ್ರಾಮದ ಅಭಿವೃದ್ಧಿಯ ಜವಾಬ್ದಾರಿ ನನ್ನದೇ. ಅಲ್ಲಿನ ಜನರು ನನ್ನ ಅನುಪಸ್ಥಿತಿಯನ್ನು ಅನುಭವಿಸಲು ನಾನು ಬಿಡುವುದಿಲ್ಲ. ಚುನಾವಣೆ ವೇಳೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆ,” ಎಂದು ಜನರಿಗೆ ಭರವಸೆ ನೀಡಿದರು.

ಸುವೇಂದು ಅಧಿಕಾರಿ ಅವರ ಈ ನಿರ್ಧಾರದಿಂದಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ಮುಖ್ಯಮಂತ್ರಿಗಳ ಈ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ತಮ್ಮ ಎರಡೂ ಕ್ಷೇತ್ರಗಳ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !