August 22, 2026
Saturday, August 22, 2026
spot_img

ಡಿಜಿಟಲ್ ಕ್ರಾಂತಿಗೆ ಸಜ್ಜಾದ ಸಿಲಿಕಾನ್ ಸಿಟಿ: ಆಸ್ತಿ ದಾಖಲೆಗಳ ಹಸ್ತಾಂತರಕ್ಕೆ ಡಿಕೆಶಿ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರ ದಶಕಗಳ ಕಾಲದ ಆತಂಕಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಆಸ್ತಿ ದಾಖಲೆಗಳಿಗಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ‘ನಮ್ಮ ಖಾತೆ ನಮ್ಮ ಹಕ್ಕು’ ಎಂಬ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಅಧಿಕೃತ ದಾಖಲೆಗಳನ್ನು ತಲುಪಿಸಲು ಸರ್ಕಾರ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಈ ಯೋಜನೆಯನ್ನು ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ಬಣ್ಣಿಸಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ನಾಗರಿಕ ಸ್ನೇಹಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಸುಮಾರು 23 ಲಕ್ಷ ಆಸ್ತಿಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ.

ಪ್ರತಿ ಆಸ್ತಿಯನ್ನು ಜಿಪಿಎಸ್ ತಂತ್ರಜ್ಞಾನದ ಮೂಲಕ ಮ್ಯಾಪಿಂಗ್ ಮಾಡಲಾಗುವುದು. ಇದರಲ್ಲಿ ಸೈಟ್‌ನ ನಿಖರ ಲೊಕೇಶನ್ ಮತ್ತು ಮಾಲೀಕರ ಫೋಟೋ ಕೂಡ ಇರಲಿದೆ.

ಆಸ್ತಿ ದಾಖಲೆಗಳ ಅಕ್ರಮ ತಡೆಯಲು ಈಗಾಗಲೇ 7 ಸಾವಿರಕ್ಕೂ ಹೆಚ್ಚು ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸುವ ದಂದೆಗೆ ಕಡಿವಾಣ ಬೀಳಲಿದೆ.

ಮುಂಬರುವ ಮೇ 16ರಿಂದ ಈ ಬೃಹತ್ ಅಭಿಯಾನ ಅಧಿಕೃತವಾಗಿ ಆರಂಭವಾಗಲಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ನೇರವಾಗಿ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ ಸಿದ್ಧಪಡಿಸಿದ ಫೈಲ್‌ಗಳನ್ನು ಹಸ್ತಾಂತರಿಸಲಿದ್ದಾರೆ.

ಈ ಮಹತ್ವದ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಹ್ಯಾರಿಸ್, ಸಚಿವ ಕೆ.ಜೆ. ಜಾರ್ಜ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಆಡಳಿತಾಧಿಕಾರಿ ಮಹೇಶ್ವರ್ ರಾವ್ ಉಪಸ್ಥಿತರಿದ್ದರು. ಈ ಯೋಜನೆಯು ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !