May 13, 2026
Wednesday, May 13, 2026
spot_img

ಕೇಂದ್ರ ಸರಕಾರದಿಂದ ರೈತರಿಗೆ ಗುಡ್ ನ್ಯೂಸ್: ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಗ್ರೀನ್ ಸಿಗ್ನಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, 2026-27ರ ಮಾರುಕಟ್ಟೆ ಋತುವಿನಲ್ಲಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.

ಕ್ಯಾಬಿನೆಟ್ ಸಭೆ ಬಳಿಕ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಈ ಬಾರಿ ತೈಲಬೀಜಗಳು ಮತ್ತು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂಗಾರು ಋತುವಿನಲ್ಲಿ ಅಂದಾಜು 824 ಲಕ್ಷ ಮೆಟ್ರಿಕ್ ಟನ್ ಬೆಳೆಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ರೈತರಿಗೆ 2 ಲಕ್ಷ 60 ಸಾವಿರ ಕೋಟಿ ರೂ. ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಾಲ್‌ಗೆ 622 ರೂ. ಹೆಚ್ಚಳ ನೀಡಲಾಗುವುದು. ಅದೇ ರೀತಿ ಹತ್ತಿಗೆ ಕ್ವಿಂಟಾಲ್‌ಗೆ 557 ರೂ ., ನೈಜರ್ ಬೀಜ 515 ರೂ. ಮತ್ತು ಎಳ್ಳಿಗೆ ಕ್ವಿಂಟಾಲ್‌ಗೆ 500 ರೂ.ಗಳ ಹೆಚ್ಚಳಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇವುಗಳ ಜೊತೆಗೆ ಎ ದರ್ಜೆಯ ಭತ್ತಕ್ಕೆ ಕ್ವಿಂಟಾಲ್‌ಗೆ 2 ಸಾವಿರದ 461 ರೂ. ಕನಿಷ್ಠ ಬೆಂಬಲ ಬೆಲೆ ನೀಡಲಾಗುವುದು. ಅದೇ ರೀತಿ ಹೈಬ್ರಿಡ್‌ ಜೋಳಕ್ಕೆ 4,023 ರೂ.ಗಳು, ಬಾಜ್ರಾಗೆ ಕ್ವಿಂಟಾಲ್‌ಗೆ 2,900 ರೂ.ಗಳು ಮತ್ತು ತೊಗರಿ ಬೇಳೆಗೆ 8,450 ರೂ. ಬೆಂಬಲ ಬೆಲೆಯನ್ನು ನೀಡಲು ಮೋದಿ ಸರಕಾರ ತೀರ್ಮಾನಿಸಿದೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನಂತೆ ಎಲ್ಲಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಮುಂಗಾರು ಮಾರುಕಟ್ಟೆ ಋತುವಿನಲ್ಲಿ ಸುಮಾರು 824.41 ಲಕ್ಷ ಮೆಟ್ರಿಕ್ ಟನ್‌ಗಳ ವಾರ್ಷಿಕ ಸಂಗ್ರಹಣೆಯನ್ನು ಅಂದಾಜಿಸಿದೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ದೇಶದ ಮೊದಲ ಅರೆ-ಹೈ-ಸ್ಪೀಡ್ ರೈಲು ಕಾರಿಡಾರ್
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಮೋ ಭಾರತ್ ರೈಲು ಕಾರ್ಯಾಚರಣೆಗಳ ಅಡಿಯಲ್ಲಿ 20,667 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬ್ರಾಡ್‌ಗೇಜ್‌ನಲ್ಲಿ ಭಾರತದ ಮೊದಲ ಅರೆ-ಹೈ-ಸ್ಪೀಡ್ ರೈಲು ಕಾರಿಡಾರ್ (134 ಕಿಮೀ) ಯೋಜನೆಗೆ ಅನುಮತಿ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !