May 13, 2026
Wednesday, May 13, 2026
spot_img

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭದ್ರತೆಯಲ್ಲಿ ಭಾರೀ ಲೋಪ: ಎನ್‌ಐಎ ತನಿಖೆಗೆ ಹನುಮಂತೇಗೌಡ ಆಗ್ರಹ

ಹೊಸ ದಿಗಂತ ವರದಿ, ಚಿತ್ರದುರ್ಗ:

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ ನಡೆದಿರುವ ಭದ್ರತಾ ಲೋಪದ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಎಂದು ಮಧುಗಿರಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಹನುಮಂತೇಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪ್ರಧಾನಿಯವರು ಬಂದಾಗ ಕಾಂಗ್ರೆಸ್ ಸರ್ಕಾರ ಸರಿಯಾದ ಭದ್ರತೆ ನೀಡದೆ ಲೋಪ ಎಸಗಿದೆ. ಮೋದಿ ಅವರು ವಿಶ್ವದೆಲ್ಲೆಡೆ ಹೋದರೆ ಸೂಕ್ತ ಭದ್ರತೆ ನೀಡಲಾಗುತ್ತದೆ. ಅಂತಹದರಲ್ಲಿ ರಾಜ್ಯಕ್ಕೆ ಬಂದಾಗ ಅಗತ್ಯ ಭದ್ರತಾ ವ್ಯವಸ್ಥೆ ಮಾಡದಿರುವುದು ಸರಿಯಲ್ಲ. ಮೋದಿ ಅವರು ಕೇವಲ ಬಿಜೆಪಿಯವರಿಗೆ ಮಾತ್ರವೇ ಪ್ರಧಾನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾವಿಸಿದಂತಿದೆ. ಅವರು ದೇಶದ ಪ್ರಧಾನಿ, ಅವರ ಭದ್ರತೆಗೆ ಎಲ್ಲಾ ಕಡೆ ಆತಂಕ ಇರುತ್ತದೆ. ಆದರೆ ಇದನ್ನು ರಾಜ್ಯ ಸರ್ಕಾರ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಧಾನಿಯವರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ನೂರು ಮಂದಿ ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದಕ್ಕೆ ಅಂತಹ ತುರ್ತು ಏನಿತ್ತು. ಪ್ರಧಾನಿಯವರು ಸಾಗುವ ನಿಗದಿತ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು. ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಇದನ್ನು ಕಾಂಗ್ರೆಸ್‌ನವರಿಗೆ ಸಹಿಸಲಾಗುತ್ತಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಧಾನಿ ಮೇಲೆ ಕಾಳಜಿ ಹಾಗೂ ಗೌರವ ಇಲ್ಲ ಎಂದು ಹನುಮಂತೇಗೌಡ ದೂರಿದ್ದಾರೆ.

ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದ ದೇಶದಲ್ಲಿ ಕಷ್ಟದ ಪರಿಸ್ಥಿತಿ ಇದೆ. ಪೆಟ್ರೋಲ್, ಡೀಸೆಲ್‌ನ್ನು ಮಿತವಾಗಿ ಬಳಸಿ ಎಂದು ಪ್ರಧಾನಿ ಹೇಳಿದ್ದಾರೆ. ಇವುಗಳನ್ನು ಆಮದು ಮಾಡಿಕೊಳ್ಳಲು ತೊಂದರೆ ಇದೆ. ಆದ್ದರಿಂದ ಬಳಕೆಗೆ ಮಿತಿ ಇರಲಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಇದನ್ನು ಬಿಟ್ಟರೆ ಅವರ ಹೇಳಿಕೆಯಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ. ಆದರೆ ಕಾಂಗ್ರೆಸ್ ವರು ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿದಂಬರಂ ಅವರ ಹೇಳಿಕೆಯನ್ನು ಮರೆತ ಕಾಂಗ್ರೆಸ್ ದೇಶದ ಜನರನ್ನು ಮರೆತಿದೆ. ಮೋದಿ ಅವರಿಂದಾಗಿ ಇಡೀ ವಿಶ್ವದಲೇ ಭಾರತಕ್ಕೆ ಗೌರವ ಸಿಗುತ್ತಿದೆ. ಎಷ್ಟೋ ವರ್ಷಗಳ ನಂತರ ದೇಶಕ್ಕೆ ಈ ಗೌರವ ಸಿಗುತ್ತಿದೆ. ಮೇಕ್ ಇನ್ ಇಂಡಿಯಾಗೆ ಆದ್ಯತೆ ಸಿಗಬೇಕು. ಜನರಲ್ಲಿ ಜಾಗೃತಿ ಮೂಡಬೇಕು ಎಂದು ಪ್ರಧಾನಿ ಅವರು ಮಿತ ಬಳಕೆಗೆ ಸಲಹೆ ನೀಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿದ್ದು, ಜಿಡಿಪಿ ಹೆಚ್ಚಾಗಿದೆ. ಇದನ್ನೆಲ್ಲ ತಿಳಿಯದ ಕಾಂಗ್ರೆಸ್‌ನವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹನುಮಂತೇಗೌಡ ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !