May 14, 2026
Thursday, May 14, 2026
spot_img

ಬದಲಾಗಲಿದೆಯೇ ಜಾಗತಿಕ ರಾಜಕೀಯ? ಚೀನಾ-ಅಮೆರಿಕ ಸಹಕಾರಕ್ಕೆ ಜಿನ್‌ಪಿಂಗ್ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಮತ್ತು ಚೀನಾ ನಡುವಿನ ದಶಕಗಳ ಶೀತಲ ಸಮರಕ್ಕೆ ಅಂತ್ಯ ಹಾಡುವ ಸುಳಿವು ಲಭ್ಯವಾಗಿದೆ. ಚೀನಾಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೀಜಿಂಗ್‌ನಲ್ಲಿ ಸ್ವಾಗತಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಪರ್ವ ಆರಂಭವಾಗಲಿ ಎಂದು ಆಶಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಜಿನ್‌ಪಿಂಗ್, “ಅಮೆರಿಕ ಮತ್ತು ಚೀನಾ ಪರಸ್ಪರ ವೈರಿಗಳಾಗುವ ಬದಲು ಪಾಲುದಾರರಾಗಬೇಕು. ಸಂಘರ್ಷದಿಂದ ಇತ್ತಂಡಗಳಿಗೂ ನಷ್ಟವೇ ಹೊರತು ಲಾಭವಿಲ್ಲ. ನಾವು ಸಹಕಾರದ ಹಾದಿಯಲ್ಲಿ ಸಾಗಿದರೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ” ಎಂದು ಪ್ರತಿಪಾದಿಸಿದರು. ಪ್ರಸ್ತುತ ಜಗತ್ತು ಒಂದು ಶತಮಾನದಲ್ಲೇ ಕಾಣದಂತಹ ಭಾರಿ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದ್ದು, ಇಂತಹ ಸ್ಥಿತ್ಯಂತರದ ಸಮಯದಲ್ಲಿ ಅಮೆರಿಕ ಮತ್ತು ಚೀನಾದ ನಡುವಿನ ಸ್ಥಿರತೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸುಮಾರು ಒಂಬತ್ತು ವರ್ಷಗಳ ದೀರ್ಘ ಅಂತರದ ನಂತರ ಚೀನಾಕ್ಕೆ ಭೇಟಿ ನೀಡಿದ ಟ್ರಂಪ್ ಅವರನ್ನು ಜಿನ್‌ಪಿಂಗ್ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಅಮೆರಿಕದ ಜನತೆಗೆ ಜಿನ್‌ಪಿಂಗ್ ಶುಭಾಶಯ ಕೋರಿದರು.

ಈ ಭೇಟಿಯು ಕೇವಲ ರಾಜತಾಂತ್ರಿಕ ಭೇಟಿಯಾಗಿ ಉಳಿಯದೆ, ವ್ಯಾಪಾರ ಒಪ್ಪಂದಗಳು, ಉನ್ನತ ತಂತ್ರಜ್ಞಾನ ಹಂಚಿಕೆ ಮತ್ತು ಜಾಗತಿಕ ಭದ್ರತೆಯ ವಿಷಯದಲ್ಲಿ ಹೊಸ ಆಯಾಮ ನೀಡುವ ಸಾಧ್ಯತೆಯಿದೆ. ಉಭಯ ದೇಶಗಳ ನಡುವೆ ಯುದ್ಧದ ಆತಂಕವಿದ್ದ ಜಾಗತಿಕ ವಲಯದಲ್ಲಿ, ಜಿನ್‌ಪಿಂಗ್ ಅವರ ಈ ‘ಶಾಂತಿ ಮಂತ್ರ’ ಹೊಸ ಭರವಸೆಯನ್ನು ಮೂಡಿಸಿದೆ.

ಮುಂದಿನ ದಿನಗಳಲ್ಲಿ ತೈವಾನ್ ವಿವಾದ, ವ್ಯಾಪಾರ ಸುಂಕ ಮತ್ತು ತಂತ್ರಜ್ಞಾನದ ಪೈಪೋಟಿಯ ನಡುವೆಯೂ ಈ ಎರಡು ರಾಷ್ಟ್ರಗಳು ಹೇಗೆ ಸಹಕರಿಸಲಿವೆ ಎಂಬುದು ಕುತೂಹಲಕಾರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !