ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಬುಧವಾರ ಈ ವರ್ಷದ 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಬಾರಿ ಒಟ್ಟಾರೆ ಶೇ. 85.2 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ ವರ್ಷದ ತೇರ್ಗಡೆ ಪ್ರಮಾಣಕ್ಕೆ (ಶೇ. 88.39) ಹೋಲಿಸಿದರೆ ಈ ಬಾರಿ ಶೇ.3.19 ರಷ್ಟು ಕುಸಿತವಾಗಿದೆ.
ಮಂಡಳಿಯ ಮಾಹಿತಿಯ ಪ್ರಕಾರ, ದೇಶಾದ್ಯಂತ ಒಟ್ಟು 17,80,365 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು ಮತ್ತು ಅವರಲ್ಲಿ 17,68,968 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಒಟ್ಟು 15,07,109 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಹುಡುಗಿಯರೇ ಉತ್ತಮ ಸಾಧನೆ ಮಾಡಿದ್ದಾರೆ. ಲಿಂಗ ಆಧಾರಿತ ತೇರ್ಗಡೆ ಪ್ರಮಾಣದ ವ್ಯತ್ಯಾಸವು ಶೇ. 6.73 ರಷ್ಟಿದ್ದು, ಹಿಂದಿನ ವರ್ಷಗಳ ಟ್ರೆಂಡ್ ಈ ಬಾರಿಯೂ ಮುಂದುವರಿದಿದೆ. ಆದರೆ, ಅರೋಗ್ಯಕರ ಶೈಕ್ಷಣಿಕ ಸ್ಪರ್ಧೆಯನ್ನು ಹಿಚ್ಚಿಸುವ ಸಲುವಾಗಿ ಮಂಡಳಿಯು ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ತಿರುವನಂತಪುರಂ ವಲಯವು ಶೇ. 95.62 ರಷ್ಟು ಅತ್ಯುತ್ತಮ ತೇರ್ಗಡೆ ಪ್ರಮಾಣದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪ್ರಯಾಗ್‌ರಾಜ್ ವಲಯವು ಶೇ. 72.43 ರಷ್ಟು ತೇರ್ಗಡೆ ಪ್ರಮಾಣದೊಂದಿಗೆ ಅತ್ಯಂತ ಕಡಿಮೆ ಸಾಧನೆ ಮಾಡಿದ ವಲಯವಾಗಿದೆ.
ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳನ್ನು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್, ಮಂಡಳಿಯ ಫಲಿತಾಂಶ ಪೋರ್ಟಲ್, ಡಿಜಿಲಾಕರ್ (DigiLocker) ಮತ್ತು ಉಮಂಗ್ (UMANG) ಆ್ಯಪ್ ಸೇರಿದಂತೆ ಹಲವು ಅಧಿಕೃತ ವೇದಿಕೆಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಎಸ್‌ಎಂಎಸ್ (SMS) ಸೇವೆಗಳ ಮೂಲಕವೂ ಫಲಿತಾಂಶವನ್ನು ಪಡೆಯಲು ಮಂಡಳಿಯು ಅವಕಾಶ ಕಲ್ಪಿಸಿದೆ.
ಈ ವರ್ಷ ಫೆಬ್ರವರಿ 17 ರಿಂದ ಏಪ್ರಿಲ್ 10 ರವರೆಗೆ ಭಾರತ ಮತ್ತು ವಿದೇಶಗಳ ವಿವಿಧ ಕೇಂದ್ರಗಳಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಒಂದೇ ಶಿಫ್ಟ್‌ನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ವಿಶೇಷವೆಂದರೆ, ವಿದೇಶಗಳಲ್ಲಿರುವ ಸಿಬಿಎಸ್‌ಇ ಸಂಯೋಜಿತ ಶಾಲೆಗಳ ವಿದ್ಯಾರ್ಥಿಗಳ ಸಾಧನೆಯಲ್ಲೂ ಈ ವರ್ಷ ಕುಸಿತ ಕಂಡುಬಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, 185 ವಿದೇಶಿ ಶಾಲೆಗಳು ಮತ್ತು 115 ಪರೀಕ್ಷಾ ಕೇಂದ್ರಗಳು ಪರೀಕ್ಷೆಗಳಲ್ಲಿ ಭಾಗವಹಿಸಿದ್ದವು. ಒಟ್ಟು 24,047 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 24,009 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 21,728 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ವಿದೇಶಿ ಶಾಲೆಗಳ ಒಟ್ಟಾರೆ ತೇರ್ಗಡೆ ಪ್ರಮಾಣ ಶೇ. 90.5 ರಷ್ಟಿದೆ.
ವಿದೇಶಿ ಶಾಲೆಗಳಲ್ಲಿ ಓದುತ್ತಿರುವ ಹುಡುಗಿಯರೂ ಸಹ ಹುಡುಗರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಹುಡುಗಿಯರ ತೇರ್ಗಡೆ ಪ್ರಮಾಣ ಶೇ. 92.23 ರಷ್ಟಿದ್ದರೆ, ಹುಡುಗರು ಶೇ. 88.69 ರಷ್ಟು ತೇರ್ಗಡೆ ಪ್ರಮಾಣ ದಾಖಲಿಸಿದ್ದಾರೆ. ಇದಕ್ಕೆ ಹೋಲಿಸಿದರೆ, ಕಳೆದ ವರ್ಷ ವಿದೇಶಿ ಶಾಲೆಗಳ ಒಟ್ಟಾರೆ ತೇರ್ಗಡೆ ಪ್ರಮಾಣ ಶೇ. 95.01 ರಷ್ಟಿತ್ತು, ಅಂದರೆ ಈ ಬಾರಿ ಶೇ. 4.51 ರಷ್ಟು ಕುಸಿತ ಉಂಟಾಗಿದೆ.



