May 14, 2026
Thursday, May 14, 2026
spot_img

ನಕಲಿ ಪಾಸ್ ಪೋರ್ಟ್ ತಯಾರಿಸಿ ಇಸ್ರೇಲ್ ಗೆ ಹಾರಿದ ಮಹಿಳೆ: ಕರಾವಳಿಯಲ್ಲೊಂದು ಶಾಕಿಂಗ್ ಘಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಹೊರವಲಯ ಉಳ್ಳಾಲ ಬೈಲ್ ಮೂಲದ ಮಹಿಳೆಯೊಬ್ಬರ ದಾಖಲಾತಿಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ತೆರಳಿದ ಆರೋಪ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಸಿ.ಎಸ್.ಬಿ. ಮಂಗಳೂರು ನಗರದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಬಿ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಯಶೋಧ ಕೇಶವ ಎಂಬವರ ಹೆಸರಿನಲ್ಲಿ ಅನ್ಯ ಮಹಿಳೆ ಪಾಸ್‌ಪೋರ್ಟ್ ಪಡೆದು ವಿದೇಶ ಪ್ರಯಾಣ ಮಾಡಿರುವ ಕುರಿತು ಮೇ 8ರಂದು ಪೊಲೀಸರಿಗೆ ಖಚಿತ ಮಾಹಿತಿ ದೊರಕಿತ್ತು.
ಪಾಸ್‌ಪೋರ್ಟ್ ಅಪ್ಲಿಕೇಶನ್ ಸಂಖ್ಯೆ BNX067061521924 ಪರಿಶೀಲಿಸಿದ ವೇಳೆ ಅರ್ಜಿಯಲ್ಲಿ ನಮೂದಿಸಿದ್ದ ಹೆಸರು, ವಿಳಾಸ ಹಾಗೂ ಭಾವಚಿತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ. ತನಿಖೆಯಲ್ಲಿ ಪಾಸ್‌ಪೋರ್ಟ್‌ನಲ್ಲಿ ಬಳಸಿದ್ದ ಭಾವಚಿತ್ರವು ಪ್ರೀತಾ ಡಿ’ಸೋಜಾ ಎಂಬವರದ್ದು ಎಂದು ತಿಳಿದುಬಂದಿದೆ.

ಪಾಸ್‌ಪೋರ್ಟ್ ಸೇವಾ ಪೋರ್ಟಲ್ ದಾಖಲೆಗಳ ಪ್ರಕಾರ, ಅರ್ಜಿಯಲ್ಲಿ “ಯಶೋಧ ಕೇಶವ “
ಎಂದು ಕೈಬರಹದಲ್ಲಿ ನಮೂದಿಸಿ, ಅದರೊಂದಿಗೆ ಪ್ರೀತಾ ಡಿ’ಸೋಜಾ ಅವರ ಭಾವಚಿತ್ರ ಅಳವಡಿಸಲಾಗಿದ್ದು, ಯಶೋಧ ಎಂಬ ಹೆಸರಿನ ಸಹಿಯನ್ನೂ ಪ್ರೀತಾ ಡಿ’ಸೋಜಾ ಮಾಡಿರುವುದು ಪತ್ತೆಯಾಗಿದೆ.

ಇನ್ನಷ್ಟು ಪರಿಶೀಲನೆ ನಡೆಸಿದಾಗ, ಪ್ರೀತಾ ಡಿ’ಸೋಜಾ ಅವರು ಯಶೋಧ ಕೇಶವ ಅವರ ದಾಖಲೆಗಳಲ್ಲಿದ್ದ ವಿಳಾಸವನ್ನು ಬಳಸಿ ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ಪಾಸ್‌ಪೋರ್ಟ್ ಪಡೆದುಕೊಂಡು, 2025ರ ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಿರುವುದು ತಿಳಿದುಬಂದಿದೆ.

ಈ ಅಕ್ರಮಕ್ಕೆ ಉಳ್ಳಾಲ ನಿವಾಸಿ ಪ್ರೇಮ್ ಡಿ’ಸೋಜಾ ಸಹಕಾರ ನೀಡಿದ್ದಾನೆ ಎನ್ನಲಾಗಿದ್ದು, ಪ್ರೀತಾ ಡಿ’ಸೋಜಾ ಅವರನ್ನು ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಯಶೋಧ ಕೇಶವ ಅವರ ದಾಖಲಾತಿಗಳನ್ನು ಬಳಸಿ ಪಾಸ್‌ಪೋರ್ಟ್ ಸಿದ್ಧಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹಾಗೆಯೇ, ಯಶೋಧ ಕೇಶವ ಅವರು ತಮ್ಮ ದಾಖಲಾತಿಗಳನ್ನು ಪ್ರೀತಾ ಡಿ’ಸೋಜಾ ಅವರಿಗೆ ನೀಡಿ ನಕಲಿ ಪಾಸ್‌ಪೋರ್ಟ್ ಪಡೆಯಲು ಸಹಕರಿಸಿರುವ ಆರೋಪವೂ ಕೇಳಿಬಂದಿದೆ.

ಪ್ರಕರಣದಲ್ಲಿ ಪ್ರೀತಾ ಡಿ’ಸೋಜಾ, ಪ್ರೇಮ್ ಡಿ’ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಇತರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !