ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇಂಧನ ಉಳಿತಾಯಕ್ಕೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರದ ಕ್ರಮಗಳ ನಡುವೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೀಡಿದ ಮಿತವ್ಯಯದ ಕರೆಯನ್ನು ಅನುಸರಿಸಿ ರಾಜ್ಯಪಾಲರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧಕ್ಕಿಳಿಸಲು ತೀರ್ಮಾನಿಸಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದ ತೈಲ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಸಂರಕ್ಷಣೆ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ಕರೆ ನೀಡಿದ್ದರು. ಅದರ ಬೆನ್ನಲ್ಲೇ ರಾಜ್ಯಪಾಲರ ಈ ಕ್ರಮ ಗಮನ ಸೆಳೆದಿದೆ.
ಇದನ್ನೂ ಓದಿ:
ಲೋಕಭವನದ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಅಗತ್ಯವಿರುವ ಕನಿಷ್ಠ ವಾಹನಗಳನ್ನು ಮಾತ್ರ ಬೆಂಗಾವಲಿನಲ್ಲಿ ಬಳಸಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಜನರಿಗೆ ಮನವಿ ಮಾಡಿದ್ದರು. ಮೆಟ್ರೋ ಪ್ರಯಾಣ, ಕಾರ್‌ಪೂಲಿಂಗ್, ವಿದ್ಯುತ್ ವಾಹನಗಳ ಬಳಕೆ ಹಾಗೂ ರೈಲು ಮೂಲಕ ಸರಕು ಸಾಗಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದರು.
ರಾಜ್ಯಪಾಲರ ಈ ನಿರ್ಧಾರ ಇದೀಗ ಆಡಳಿತ ವಲಯದಲ್ಲಿ, ಇಂಧನ ಉಳಿತಾಯದ ಬಗ್ಗೆ ಸರ್ಕಾರದ ಗಂಭೀರತೆಯನ್ನು ತೋರಿಸುತ್ತಿದೆ.



