July 2, 2026
Thursday, July 2, 2026
spot_img

ನಯಾರಾ ಪೆಟ್ರೋಲ್ ಬಂಕ್‌ಗಳಲ್ಲಿ ಭರ್ಜರಿ ಆಫರ್: ಪೆಟ್ರೋಲ್ 5 ರೂ., ಡೀಸೆಲ್ 3 ರೂ. ಇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದಲ್ಲಿ ಗಗನಕ್ಕೇರಿದ್ದ ಇಂಧನ ದರದಿಂದ ಕಂಗಾಲಾಗಿದ್ದ ಸಾರ್ವಜನಿಕರಿಗೆ ಇಂದು ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಭಾರತದ ಅತಿ ದೊಡ್ಡ ಖಾಸಗಿ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಯಾದ ‘ನಯಾರಾ ಎನರ್ಜಿ’ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಕಂಪನಿಯು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 5 ರೂ. ಹಾಗೂ ಡೀಸೆಲ್ ದರದಲ್ಲಿ ಲೀಟರ್‌ಗೆ 3 ರೂ. ಇಳಿಕೆ ಮಾಡಿದೆ.  

ನಯಾರಾ ಎನರ್ಜಿಯ ದೇಶಾದ್ಯಂತ ಇರುವ 7,000ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳಲ್ಲಿ ಹೊಸ ದರ ಅನ್ವಯವಾಗಲಿದೆ.ಕಳೆದ ಎರಡು ವರ್ಷಗಳಲ್ಲೇ ತೈಲ ಕಂಪನಿಯೊಂದು ಚಿಲ್ಲರೆ ಇಂಧನ ದರವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಳಿಸಿರುವುದು ಇದೇ ಮೊದಲು. ಅಂತಿಮ ಚಿಲ್ಲರೆ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ಆಯಾ ಭಾಗದ ವ್ಯಾಟ್   ತೆರಿಗೆಗೆ ಅನುಗುಣವಾಗಿ ಕೊಂಚ ಬದಲಾಗಬಹುದು.

ಬೆಲೆ ಇಳಿಕೆಗೆ ಕಾರಣವೇನು? ಜಾಗತಿಕ ಹಿನ್ನೆಲೆ

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧ ಹಾಗೂ ಬಿಕ್ಕಟ್ಟಿನ ವಾತಾವರಣ ಸದ್ಯ ತಿಳಿಗೊಂಡಿದೆ. ಪ್ರಮುಖ ಸಮುದ್ರ ಇಂಧನ ಸಾಗಣೆ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸಿ ಪೂರೈಕೆಯನ್ನು ಯಥಾಸ್ಥಿತಿಗೆ ತರಲಾಗಿದೆ. ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಗಣನೀಯವಾಗಿ ಕುಸಿದಿರುವುದರಿಂದ ಕಂಪನಿಯು ಈ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ.

ಇದನ್ನೂ ಓದಿ:

ಮಾರ್ಚ್ ತಿಂಗಳ ದರ ಏರಿಕೆಗೆ ಬ್ರೇಕ್

ಈ ಹಿಂದೆ ಪಶ್ಚಿಮ ಏಷ್ಯಾ ಸಂಘರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆ ಬ್ಯಾರೆಲ್‌ಗೆ $120 ತಲುಪಿದಾಗ, ನಯಾರಾ ಎನರ್ಜಿ ಮಾರ್ಚ್ 26 ರಂದು ಪೆಟ್ರೋಲ್ ಬೆಲೆಯನ್ನು 5 ರೂ. ಹಾಗೂ ಡೀಸೆಲ್ ಬೆಲೆಯನ್ನು 3 ರೂ. ಹೆಚ್ಚಿಸಿತ್ತು. ಇದೀಗ ಮಾರುಕಟ್ಟೆ ಸ್ಥಿರವಾಗಿರುವುದರಿಂದ ಅಂದಿನ ದರ ಏರಿಕೆಯನ್ನು ಕಂಪನಿ ಸಂಪೂರ್ಣವಾಗಿ ಹಿಂಪಡೆದಂತಾಗಿದೆ.

ಸದ್ಯಕ್ಕೆ ಖಾಸಗಿ ಬಂಕ್‌ಗಳಲ್ಲಿ ದರ ಇಳಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಮ್ಮ ದರಗಳನ್ನು ಪರಿಷ್ಕರಿಸಲಿವೆಯೇ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !