May 15, 2026
Friday, May 15, 2026
spot_img

IPL | ಪಂಜಾಬ್ ಗೆ ಆಘಾತ ನೀಡಿದ ಮುಂಬೈ: ಬುಮ್ರಾ ಸಾರಥ್ಯದ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ಆಘಾತ ನೀಡಿದೆ. ಪ್ಲೇಆಫ್ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಪಂಜಾಬ್ ಸೋಲುವ ಮೂಲಕ ಟೂರ್ನಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಆದರೆ, ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್, ಗೌರವದ ಜಯ ಸಾಧಿಸುವ ಮೂಲಕ ಅಭಿಮಾನಿಗಳಲ್ಲಿ ಹರ್ಷ ತಂದಿದೆ.

ವಿಶೇಷವೆಂದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಮೊದಲ ಬಾರಿಗೆ ವಹಿಸಿಕೊಂಡಿದ್ದ ಜಸ್ಪ್ರೀತ್ ಬುಮ್ರಾ, ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲೇ ಗೆಲುವಿನ ರುಚಿ ನೋಡಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಈ ಗೆಲುವು ಹೊಸ ಚೈತನ್ಯ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, ನಿಗದಿತ 20 ಓವರ್‌ಗಳಲ್ಲಿ ಬೃಹತ್ ಮೊತ್ತವನ್ನೇ ಕಲೆಹಾಕಿತು. ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ (57 ರನ್, 32 ಎಸೆತ, 6 ಬೌಂಡರಿ, 4 ಸಿಕ್ಸರ್) ಸ್ಪೋಟಕ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್‌ಜೈ 38 ರನ್ ಗಳಿಸಿ ನೆರವಾದರು. ಅಂತಿಮ ಹಂತದಲ್ಲಿ ವಿಷ್ಣು ವಿನೋದ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ ಮುಂಬೈಗೆ 201 ರನ್ಗಳ ಕಠಿಣ ಗುರಿ ನೀಡಿತು.

ಮುಂಬೈ ಪರ ಬೌಲಿಂಗ್‌ನಲ್ಲಿ ಮಿಂಚಿದ ಶಾರ್ದೂಲ್ ಠಾಕೂರ್ 39 ರನ್‌ಗಳಿಗೆ 4 ವಿಕೆಟ್ ಕಿತ್ತು ಪಂಜಾಬ್‌ಗೆ ಲಗಾಮು ಹಾಕಿದರು. ದೀಪಕ್ ಚಾಹರ್ 2 ವಿಕೆಟ್ ಪಡೆದರೆ, ನಾಯಕ ಬುಮ್ರಾ ಈ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲರಾದರು.

201 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. ರಯಾನ್ ರಿಕಲ್ಟನ್ 48 ರನ್ ಹಾಗೂ ರೋಹಿತ್ ಶರ್ಮಾ 25 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಪಂದ್ಯದ ಹಾದಿ ಬದಲಿಸಿದ್ದು ಯುವ ಆಟಗಾರ ತಿಲಕ್ ವರ್ಮಾ.

ಕೇವಲ 33 ಎಸೆತಗಳನ್ನು ಎದುರಿಸಿದ ತಿಲಕ್, 6 ಬೌಂಡರಿ ಹಾಗೂ 6 ಅಮೋಘ ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ವಿಲ್ ಜ್ಯಾಕ್ಸ್ ಜೊತೆಗೂಡಿ 5ನೇ ವಿಕೆಟ್‌ಗೆ 56 ರನ್‌ಗಳ ಮಹತ್ವದ ಪಾಲುದಾರಿಕೆ ನೀಡಿದ ತಿಲಕ್, 20ನೇ ಓವರ್‌ನ 5ನೇ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !