May 15, 2026
Friday, May 15, 2026
spot_img

ಪಂಜಾಬ್ ಪ್ಲೇ-ಆಫ್ ಹಾದಿ ಅತಂತ್ರ: ಗೆಲುವಿನ ಜೊತೆಗೆ ‘ಅದೃಷ್ಟ’ವೂ ಬೇಕು ಶ್ರೇಯಸ್ ಸೇನೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯ ಶಿಖರ ಏರಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ, ಈಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಟೂರ್ನಿಯ ದ್ವಿತೀಯಾರ್ಧದಲ್ಲಿ ಸತತ ಐದು ಪಂದ್ಯಗಳನ್ನು ಸೋತಿರುವ ಪಂಜಾಬ್ ತಂಡದ ಪ್ಲೇ-ಆಫ್ ಹಾದಿ ಈಗ ಕೇವಲ ತಂಡದ ಪ್ರದರ್ಶನವನ್ನಷ್ಟೇ ಅಲ್ಲದೆ, ‘ಅದೃಷ್ಟ’ವನ್ನೂ ನೆಚ್ಚಿಕೊಳ್ಳುವಂತಾಗಿದೆ.

ಸೀಸನ್‌ನ ಮೊದಲಾರ್ಧದಲ್ಲಿ ಸತತ ಆರು ಗೆಲುವುಗಳೊಂದಿಗೆ ಬೀಗುತ್ತಿದ್ದ ಪಂಜಾಬ್ ತಂಡಕ್ಕೆ ಎರಡನೇ ಹಂತದಲ್ಲಿ ಗ್ರಹಚಾರ ಸರಿಯಿಲ್ಲದಂತಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿ ಅಂಕ ಹಂಚಿಕೆಯಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಸದ್ಯ 13 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್‌ಗೆ ಇನ್ನುಳಿದ ಎರಡು ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ.

ಅಂಕಪಟ್ಟಿಯ ಸದ್ಯದ ಚಿತ್ರಣ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: 16 ಅಂಕಗಳು (ಮೊದಲ ಸ್ಥಾನ, ಉತ್ತಮ ರನ್ ರೇಟ್ +1.053).

ಗುಜರಾತ್ ಟೈಟಾನ್ಸ್: 16 ಅಂಕಗಳು (ಎರಡನೇ ಸ್ಥಾನ).

ಸನ್ ರೈಸರ್ಸ್ ಹೈದರಾಬಾದ್: 14 ಅಂಕಗಳು (ಮೂರನೇ ಸ್ಥಾನ).

ಪಂಜಾಬ್ ಕಿಂಗ್ಸ್: 13 ಅಂಕಗಳು (ನಾಲ್ಕನೇ ಸ್ಥಾನ).

ಪಂಜಾಬ್ ಕಿಂಗ್ಸ್ ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದರೆ ಒಟ್ಟು 17 ಅಂಕಗಳನ್ನು ಗಳಿಸಲಿದೆ. ಆದರೆ, ಐದನೇ ಮತ್ತು ಆರನೇ ಸ್ಥಾನದಲ್ಲಿರುವ ಸಿಎಸ್‌ಕೆ ಮತ್ತು ಆರ್‌ಆರ್ ತಂಡಗಳು ತಲಾ 12 ಅಂಕಗಳನ್ನು ಹೊಂದಿದ್ದು, ಮೂರು ಪಂದ್ಯಗಳು ಬಾಕಿ ಇವೆ. ಈ ಎರಡು ತಂಡಗಳು ತಮ್ಮ ಎಲ್ಲಾ ಪಂದ್ಯಗಳನ್ನು ಗೆದ್ದರೆ 18 ಅಂಕಗಳನ್ನು ಪಡೆಯಲಿವೆ.

ಹೀಗಾಗಿ, ಪಂಜಾಬ್ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದರ ಜೊತೆಗೆ, ಆರ್‌ಸಿಬಿ ಸೇರಿದಂತೆ ಟಾಪ್ 6ರಲ್ಲಿರುವ ಇತರ ತಂಡಗಳು ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ಇತರ ತಂಡಗಳ ಫಲಿತಾಂಶದ ಮೇಲೆ ಪಂಜಾಬ್‌ನ ಭವಿಷ್ಯ ನಿಂತಿದೆ ಎನ್ನುವುದೇ ಸದ್ಯದ ಕಹಿ ಸತ್ಯ.

ಮತ್ತೊಂದೆಡೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅಲಭ್ಯತೆಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂಬೈಗೆ ಕಳೆದುಕೊಳ್ಳಲು ಏನೂ ಇಲ್ಲದಿದ್ದರೂ, ಪಂಜಾಬ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಶಕ್ತಿ ಬುಮ್ರಾ ಪಡೆಗಿದೆ.

ಒಟ್ಟಿನಲ್ಲಿ, ಆರಂಭದಲ್ಲಿ ಅಬ್ಬರಿಸಿದ್ದ ಪಂಜಾಬ್ ಕಿಂಗ್ಸ್ ಈಗ ‘ಮಾಡೂ ಇಲ್ಲವೇ ಮಡಿ’ ಪರಿಸ್ಥಿತಿಯಲ್ಲಿದ್ದು, ಅಭಿಮಾನಿಗಳು ಪ್ಲೇ-ಆಫ್ ಟಿಕೆಟ್ ಸಿಗುತ್ತಾ ಎಂದು ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !