October 10, 2026
Saturday, October 10, 2026
spot_img

ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ಭೀಕರ ಸರಣಿ ದಾಳಿಗೆ 18 ಮಂದಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ವಾಯವ್ಯ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ದಾಳಿಗಳಿಂದ ಇಡೀ ದೇಶವೇ ನಲುಗಿದೆ. ನಿಷೇಧಿತ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರರು ನಡೆಸಿದ ಈ ಭೀಕರ ಕೃತ್ಯದಲ್ಲಿ ಕನಿಷ್ಠ 18 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಉಗ್ರರು ಪಾಕಿಸ್ತಾನದ ಬಜೌರ್ ಜಿಲ್ಲೆಯ ದಮಂಗಿ ಸ್ಕೌಟ್ಸ್ ಕ್ಯಾಂಪ್‌ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಮೊದಲು ಉಗ್ರನೊಬ್ಬ ಸೇನಾ ಶಿಬಿರದ ಮುಖ್ಯ ದ್ವಾರದ ಬಳಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಈ ಸ್ಫೋಟದ ತೀವ್ರತೆಗೆ ಭದ್ರತಾ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿದ್ದಂತೆ, ಸುಮಾರು 20ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಭಯೋತ್ಪಾದಕರು ಶಿಬಿರದ ಒಳಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂಘರ್ಷದಲ್ಲಿ 14 ಯೋಧರು ಹುತಾತ್ಮರಾಗಿದ್ದಾರೆ.

ಕೇವಲ ಸೇನಾ ಶಿಬಿರವಲ್ಲದೆ, ಪ್ರಾಂತ್ಯದ ಐನಾಯಿ ಕಿಲೆ ಮತ್ತು ಮಾಮಂಡ್ ಪ್ರದೇಶಗಳಲ್ಲಿರುವ ಪೊಲೀಸ್ ಚೌಕಿಗಳ ಮೇಲೂ ಉಗ್ರರು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಈ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಭವಿಸಿದ ತಕ್ಷಣ ಎಚ್ಚೆತ್ತುಕೊಂಡ ಪಾಕಿಸ್ತಾನಿ ಸೇನೆ ಇಡೀ ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ. ಅಡಗಿಕೊಂಡಿರುವ ಉಗ್ರರಿಗಾಗಿ ಬೃಹತ್ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಪದೇ ಪದೇ ನಡೆಯುತ್ತಿರುವ ಇಂತಹ ದಾಳಿಗಳು ಪಾಕಿಸ್ತಾನದ ಆಂತರಿಕ ಭದ್ರತೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಇದರಿಂದಾಗಿ ಗಡಿ ಭಾಗದ ನಾಗರಿಕರು ಮತ್ತು ಭದ್ರತಾ ಪಡೆಗಳಲ್ಲಿ ಆತಂಕ ಮನೆ ಮಾಡಿದೆ.

Must Read