May 15, 2026
Friday, May 15, 2026
spot_img

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಹೊಸದಿಗಂತ ವರದಿ ಚಿತ್ರದುರ್ಗ:

ಬಾಕಿ ಇರುವ ಗೌರವಧನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿ.ಪಂ. ಕಚೇರಿಗೆ ತೆರಳಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಇಂದು ಚಿತ್ರದುರ್ಗದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಜ್ಯದ ಆಶಾ ಕಾರ್ಯಕರ್ತೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರು. ಮುಖ್ಯವಾಗಿ ಕಳೆದ ಒಂದು ವರ್ಷದಿಂದ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ – ಪ್ರೋತ್ಸಾಹಧನ ಪ್ರತಿ ತಿಂಗಳು ಬರುತ್ತಿಲ್ಲ. ಈಗಲೂ 3-4 ತಿಂಗಳವರೆಗೆ ಕೇಂದ್ರದ ಪ್ರೋತ್ಸಾಹಧನ ಬಾಕಿ ಇದೆ. 1-2 ತಿಂಗಳ ಗೌರವಧನ ಬಾಕಿ ಇದೆ. ಪ್ರತೀ ತಿಂಗಳು ವೇತನ ನಿಗದಿತವಾಗಿ ಬರುತ್ತಿಲ್ಲ. ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಕೇಂದ್ರದ ಪ್ರೋತ್ಸಾಹಧನ ಬರುತ್ತಿಲ್ಲ ಎಂದು ಅಲವತ್ತುಕೊಂಡರು.

ಇದನ್ನೂ ಓದಿ:

ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್‌ಗಳ ಹಣ ಬಿಡುಗಡೆ ಆಗಿಲ್ಲ. (ಟಿಬಿ, ಟಿಬಿಐ, ಎನ್ಸಿಡಿ ಇತ್ಯಾದಿ) ಹಲವಾರು ಆಶಾ ಕಾರ್ಯಕರ್ತೆಯರ ಗೌರವಧನ, ಪ್ರೋತ್ಸಾಹಧನ ಹಲವಾರು ತಿಂಗಳು ಕಡಿತ ಮಾಡಲಾಗಿದೆ. ಜಿಲ್ಲಾ, ತಾಲೂಕು ಹಂತದಲ್ಲಿ ಸಮಸ್ಯೆಗಳ ಬಗ್ಗೆ ಬಗೆಹರಿಸಲು ಕೇಳಿದರೆ, ರಾಜ್ಯದಿಂದ ಇರುವ ಸಮಸ್ಯೆಯೆಂದು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಒಟ್ಟಾರೆ ಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆಂದು ಪ್ರತಿಭಟನಾಕಾರರು ದೂರಿದರು.

ಮತ್ತೊಂದೆಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಏಪ್ರಿಲ್ 21 ರ ಪತ್ರದ ಪ್ರಕಾರ 9 ವಿವಿಧ ಸೇವೆಗಳನ್ನು ಆಶಾನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯೆಗೊಳಿಸಲಾಗಿದೆ. ಇದರಿಂದ ಪ್ರತೀ ಕಾರ್ಯಕರ್ತೆಗೆ 500-1000 ರೂ.ವರೆಗೆ ಪ್ರೋತ್ಸಾಹಧನ ಕಡಿತವಾಗಲಿದೆ. ಈ ಕೆಲಸಗಳನ್ನು ಆಶಾ ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ಇವು ತಾಯಿ-ಮಗು ಸುರಕ್ಷತೆಗೆ, ಬಡ ಜನತೆಯ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿವೆ.

ಈಗ ಕಾರ್ಯಕರ್ತೆಯರು ಈ ಸೇವೆಗಳನ್ನು ನೀಡದಿದ್ದಲ್ಲಿ ಜನರಿಗೆ ಹಲವಾರು ಸಮಸ್ಯೆಗಳು ಆಗುತ್ತವೆ ಎಂದರು.
ಕೂಡಲೇ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ದಿನಾಂಕ ನಿಗದಿ ಮಾಡಿ ಸಂಘದ ಮುಖಂಡರೊಂದಿಗೆ ಕೂಡಲೆ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾ ಮುಖಂಡರಾದ ರವಿಕುಮಾರ್, ಆಶಾ ಸಂಘದ ಜಿಲ್ಲಾಧ್ಯಕ್ಷರಾದ ಗಿರಿಜಮ್ಮ, ಲಕ್ಷ್ಮಿಬಾಯಿ, ಗುರುಶಾಂತ, ನಾಗವೇಣಿ, ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಆಶಾ ಕಾರ್ಯಕರ್ತೆಯರಾದ ಪುಟ್ಟಮ್ಮ, ಸವಿತ, ನೇತ್ರಾವತಿ, ಫಾತೀಮಾ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !