ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕಡಿಮೆ ಹಾಸಿಗೆಗಳನ್ನು ಹೊಂದಿರುವ ಸುಮಾರು ಸಾವಿರದಷ್ಟು ಸಣ್ಣ ಖಾಸಗಿ ಆಸ್ಪತ್ರೆ, ಚಿಕಿತ್ಸಾಲಯಗಳು ತಮ್ಮ ಸೇವೆ ಸ್ಥಗಿತಗೊಳಿಸಿವೆ ಅಥವಾ ದೊಡ್ಡ ಆಸ್ಪತ್ರೆಗಳೊಂದಿಗೆ ವಿಲೀನಗೊಂಡಿವೆ ಎಂಬ ಆತಂಕಕಾರಿ ಅಂಕಿಅಂಶ ಐಎಂಎ (Indian Medical Association) ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ವಿಧಿಸಲಾದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಸಣ್ಣ ಆಸ್ಪತ್ರೆಗಳಿಗೆ ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕಷ್ಟಕರವಾಗುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ರಾಜ್ಯದಾದ್ಯಂತ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಸಣ್ಣ ಆಸ್ಪತ್ರೆಗಳು ಸ್ಪರ್ಧೆಯಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಣ್ಣ ಆಸ್ಪತ್ರೆಗಳ ಅಸ್ತಿತ್ವ ಉಳಿಸಬೇಕಾದರೆ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯ ಕೆಲವು ನಿಯಮಗಳಲ್ಲಿ ಸಡಿಲಿಕೆ ಅಗತ್ಯವಿದೆ. ಇಲ್ಲದಿದ್ದರೆ ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳ ಆರೋಗ್ಯ ಸೇವೆಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಐಎಂಎ ಎಚ್ಚರಿಸಿದೆ.
ಇದನ್ನೂ ಓದಿ:
ಇನ್ನೊಂದೆಡೆ, ದೊಡ್ಡ ಖಾಸಗಿ ಆಸ್ಪತ್ರೆಗಳತ್ತ ದೇಶೀ ಹಾಗೂ ವಿದೇಶಿ ಹೂಡಿಕೆ ಹೆಚ್ಚುತ್ತಿರುವುದು ಆರೋಗ್ಯ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸುತ್ತಿದೆ. ಸಹಕಾರಿ ವಲಯದ ಮಧ್ಯಮ ಗಾತ್ರದ ಆಸ್ಪತ್ರೆಗಳೂ ವಿಸ್ತರಣೆಯತ್ತ ಸಾಗುತ್ತಿವೆ. ಇತ್ತೀಚೆಗೆ ಉತ್ತರ ಕೇರಳದಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚಾದಾಗ ದೊಡ್ಡ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳ ಕೊರತೆ ಕಂಡುಬಂದಿತ್ತು ಎಂಬುದನ್ನು ಆರೋಗ್ಯ ಕ್ಷೇತ್ರದ ತಜ್ಞರು ಉಲ್ಲೇಖಿಸಿದ್ದಾರೆ.
ನಗದುರಹಿತ ಆರೋಗ್ಯ ವಿಮೆ ಸೌಲಭ್ಯದಲ್ಲಿ ಸಣ್ಣ ಆಸ್ಪತ್ರೆಗಳಿಗೆ ಸಮರ್ಪಕ ಅವಕಾಶ ಸಿಗದಿರುವುದೂ ಅವುಗಳ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದರಿಂದ ರೋಗಿಗಳು ದೊಡ್ಡ ಆಸ್ಪತ್ರೆಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಸಣ್ಣ ಆಸ್ಪತ್ರೆಗಳ ಆದಾಯ ಕುಸಿಯುತ್ತಿದೆ.
ಸಣ್ಣ ಖಾಸಗಿ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ, ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೂ ಜನರು ಈಗ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚು ಅವಲಂಬಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಕ್ಷೇತ್ರದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.



