May 15, 2026
Friday, May 15, 2026
spot_img

2028ಕ್ಕೆ ಜೆಡಿಎಸ್​ನಿಂದಲೇ ಸ್ಪರ್ಧೆ ಮಾಡ್ತೀನಿ: ದೇವೇಗೌಡರ ಭೇಟಿ ಬಳಿಕ ಜಿಟಿಡಿ ಅಚ್ಚರಿಯ ನಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಒಂದೆಡೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದ್ದರೆ, ಅತ್ತ ಜೆಡಿಎಸ್ ಮುಂದಿನ ವಿಧಾನ ಸಭೆ ಚುನಾವಣೆಗೆ ಸಜ್ಜಾಗಲು ಪಕ್ಷವನ್ನು ಬಲಿಷ್ಠಗೊಳಿಸುತ್ತಿದೆ. ಇದರ ನಡುವೆ ಕಾಂಗ್ರೆಸ್ ಸೇರುತ್ತಾರೆ ಎಂದು ಭಾರೀ ಸುದ್ದಿಯಾಗಿದ್ದ ಜೆಡಿಎಸ್​​ ಪಕ್ಷದ ಹಿರಿಯ ನಾಯಕ ಜಿ.ಟಿ. ದೇವೇಗೌಡ ಅವರು ಇಂದು ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಹೆಚ್​​.ಡಿ. ದೇವೇಗೌಡರನ್ನು ಭೇಟಿಯಾದ ಜಿ.ಟಿ. ದೇವೇಗೌಡ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ ಅವರು, ಜೆಡಿಎಸ್​​ ನಿಂದ ಅಂತರ ಕಾಯ್ದುಕೊಂಡ ಕುರಿತು ಸ್ಪಷ್ಟನೆ ನೀಡಿದರು. ನಾನು ಜೆಡಿಎಸ್ ನಲ್ಲಿಯೇ ಇದ್ದೇನೆ. 2028 ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್​ನಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ಸೇರುವ ಊಹಾಪೋಹಗಳಿಗೆ ಜಿ.ಟಿ. ದೇವೇಗೌಡರು ತೆರೆ ಎಳೆದರು.

ಮಾಜಿ ಪ್ರಧಾನಿ ದೇವೇಗೌಡರು ರೈತರ ಪರ ನಿಂತು ದುಡಿದವರು. ಅವರ ಬಗ್ಗೆ ಅಪಾರ ಗೌರವ ಇದೆ. ಈ ಭೇಟಿ ವೇಳೆ ನಾವು ಯಾವುದೇ ರಾಜಕೀಯ ಮಾತಾಡಿಲ್ಲ. ನಿನಗೆ ಒಳ್ಳೆಯದಾಗಲಿ, ಚೆನ್ನಾಗಿರು ಎಂದು ಅಶೀರ್ವಾದ ಮಾಡಿದ್ದಾರೆ. ನಾನು ಪಕ್ಷಕ್ಕೆ ಎಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದು ಅವರಿಗೆ ತಿಳಿದಿದೆ. ನಾನು ನನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !