ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಕುರಿತು ತನಿಖೆ ನಡೆಸಿರುವ ಇಡಿ ಅಧಿಕಾರಿಗಳು, ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಬರೋಬ್ಬರಿ 1,500 ಪುಟಗಳ ಆರೋಪಪಟ್ಟಿಯಲ್ಲಿ ಹಲವು ಸ್ಫೋಟಕ ಆರೋಪಗಳನ್ನು ಉಲ್ಲೇಖಿಸಲಾಗಿದೆ.
ಅಮಾನತುಗೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ವಿರುದ್ಧ ಇಡಿ ಆರೋಪಗಳನ್ನು ಹೊರಿಸಿದೆ. ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಮತ್ತು ಉತ್ತರಗಳನ್ನು ತಲುಪಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಪೆನ್‌ಡ್ರೈವ್‌ನಲ್ಲಿ ಪ್ರಶ್ನೆಪತ್ರಿಕೆ, ಟ್ಯಾಬ್ಲೆಟ್ ಪುಡಿಪುಡಿ
ಇಡಿ ಆರೋಪದ ಪ್ರಕಾರ, ಜನವರಿ 7ರಂದು ಎಚ್‌ಪಿ ಪೆನ್‌ಡ್ರೈವ್ ಮೂಲಕ ಗ್ಯಾನೇಂದ್ರ ಕುಮಾರ್ ಅವರು ಕನ್ನಾಳೆಗೆ ಎರಡು ಪ್ರಶ್ನೆಪತ್ರಿಕೆಗಳ 80 ಅಂಕಗಳ ಪ್ರಶ್ನೆ ಮತ್ತು ಉತ್ತರಗಳನ್ನು ನೀಡಿದ್ದರು. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ ಬಳಸಿ ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನು ನಕಲು ಮಾಡಲಾಗಿತ್ತು. ಬಳಿಕ ಸಾಕ್ಷ್ಯ ಸಿಗಬಾರದು ಎಂಬ ಉದ್ದೇಶದಿಂದ ಅದೇ ದಿನ ಟ್ಯಾಬ್ಲೆಟ್ ಅನ್ನು ಪುಡಿಮಾಡಿ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:
ಅಭ್ಯರ್ಥಿಗಳಿಗೆ ವಿಲ್ಲಾಗಳಲ್ಲಿ ತರಬೇತಿ?
ಜನವರಿ 8 ಮತ್ತು 9ರಂದು ಹಲವು ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ಆರ್ಕಿಡ್ ನಿರ್ವಾಣ ಸೇರಿದಂತೆ ವಿವಿಧ ವಿಲ್ಲಾಗಳಲ್ಲಿ ಸುಮಾರು 20 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎಂದು ಇಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
1.70 ಕೋಟಿ ರೂ. ಹಣದ ವಹಿವಾಟು ಆರೋಪ
ಕನ್ನಾಳೆ ಆರಂಭದಲ್ಲಿ 80 ಲಕ್ಷ ರೂ. ಬೇಡಿಕೆಯಿಟ್ಟು ಬಳಿಕ 40 ಲಕ್ಷ ರೂ.ಗೆ ಇಳಿಸಿದ್ದರು ಎನ್ನಲಾಗಿದೆ. ಗ್ಯಾನೇಂದ್ರ ಕುಮಾರ್ ಅವರಿಂದ ಕನ್ನಾಳೆಗೆ ಒಟ್ಟು 1.70 ಕೋಟಿ ರೂ. ಹಣ ತಲುಪಿರುವ ಆರೋಪವೂ ದಾಖಲಾಗಿದೆ.



