ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಎಸಿಸಿ ಪುರುಷರ ಅಂಡರ್-19 ಏಷ್ಯಾ ಕಪ್ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್ನಿಂದ ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಯುವ ಕ್ರಿಕೆಟ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತೀಯ ಕ್ರಿಕೆಟ್ಗೆ ಇದೊಂದು ಅತ್ಯದ್ಭುತ ದಿನ” ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, “ನಮ್ಮ ಯುವ ಕ್ರಿಕೆಟಿಗರ ಇಂದಿನ ಅದ್ಭುತ ಪ್ರದರ್ಶನ ಮತ್ತು 2026ರ ಅಂಡರ್-19 ಏಷ್ಯಾ ಕಪ್ ಗೆಲುವಿನ ಬಗ್ಗೆ ಅಪಾರ ಹೆಮ್ಮೆಯಾಗುತ್ತಿದೆ. ಇವರ ಈ ಯಶಸ್ಸು ದೇಶದ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿದೆ. ತಂಡದ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಹಾರೈಸಿದ್ದಾರೆ.
ಕೊನೆಯ ಓವರ್ವರೆಗೂ ನಡೆದ ರೋಚಕ ಹಣಾಹಣಿ
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿತ್ತು. ಉಸ್ಮಾನ್ ಖಾನ್ (107), ಅಬ್ದುಲ್ ಖಾದಿರ್ (80) ಹಾಗೂ ನಾಯಕ ಫರ್ಹಾನ್ ಯೂಸುಫ್ (63) ಪಾಕ್ ಪರ ಮಿಂಚಿದರು. ಭಾರತದ ಪರ ಕಾವ್ಯ ಪಟೇಲ್ 4 ವಿಕೆಟ್ ಪಡೆದರೆ, ಚಿಗುರುಪತಿ ವೆಂಕಟ 3 ವಿಕೆಟ್ ಕಬಳಿಸಿದರು.
ಇದನ್ನೂ ಓದಿ:
338 ರನ್ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 252 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಆದರೆ 10ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಮೋಹಿತ್ ಉಲ್ವಾ ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅವರಿಗೆ ಮನಲ್ ಚೌಹಾಣ್ (47 ರನ್) ಮತ್ತು ಚಿಗುರುಪತಿ ವೆಂಕಟ ಉತ್ತಮ ಸಾಥ್ ನೀಡಿದ ಪರಿಣಾಮ, ಭಾರತ ಕೊನೆಯ ಓವರ್ನಲ್ಲಿ 339/9 ರನ್ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು.
ಟೂರ್ನಿಯ ಶ್ರೇಷ್ಠ ಆಟಗಾರ ಆರ್ಯವೀರ್ ಸೆಹ್ವಾಗ್
ಫೈನಲ್ ಪಂದ್ಯದಲ್ಲಿ 58 ರನ್ ಗಳಿಸಿದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್, ಇಡೀ ಟೂರ್ನಿಯ 5 ಪಂದ್ಯಗಳಿಂದ ಅತಿ ಹೆಚ್ಚು ಅಂದರೆ 361 ರನ್ ಕಲೆಹಾಕುವ ಮೂಲಕ ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.



