ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಐಪಿಎಲ್ ಆವೃತ್ತಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಲಕ್ನೋ ಟೂರ್ನಿಯಲ್ಲಿ ತನ್ನ 4ನೇ ಜಯ ಸಂಭ್ರಮಿಸಿದ್ದರೆ, ಇತ್ತ ಸೋಲು ಕಂಡ ಸಿಎಸ್‌ಕೆ ತಂಡದ ಪ್ಲೇಆಫ್ ಹಾದಿ ಅತ್ಯಂತ ಕಠಿಣಗೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (20) ಮತ್ತು ನಾಯಕ ರುತುರಾಜ್ ಗಾಯಕ್ವಾಡ್ (13) ನಿರಾಸೆ ಮೂಡಿಸಿದರು. ಸ್ಫೋಟಕ ಬ್ಯಾಟರ್ ಉರ್ವಿಲ್ ಪಟೇಲ್ ಕೇವಲ 6 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ಕಾರ್ತಿಕ್ ಶರ್ಮಾ 35 ಎಸೆತಗಳಲ್ಲಿ ಆಕರ್ಷಕ 71 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ಡೆವಾಲ್ಡ್ ಬ್ರೆವಿಸ್ 25 ರನ್ ಗಳಿಸಿದರೆ, ಶಿವಂ ದುಬೆ ಅಜೇಯ 32 ರನ್ ಹಾಗೂ ಪ್ರಶಾಂತವೀರ್ ಅಜೇಯ 13 ರನ್ ಕಾಣಿಕೆ ನೀಡಿದರು. ಪರಿಣಾಮ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಲಕ್ನೋ ಪರ ಆಕಾಶ್ ಸಿಂಗ್ 3 ವಿಕೆಟ್ ಕಬಳಿಸಿ ಮಿಂಚಿದರು.
188 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಮೊದಲ ವಿಕೆಟ್‌ಗೆ 135 ರನ್‌ಗಳ ಸ್ಫೋಟಕ ಜೊತೆಯಾಟವಾಡಿ ಜಯದ ಹಾದಿ ಸುಗಮಗೊಳಿಸಿದರು. ಇಂಗ್ಲಿಸ್ 36 ರನ್ ಗಳಿಸಿ ಔಟಾದರೆ, ಆರಂಭದಿಂದಲೇ ಸಿಎಸ್‌ಕೆ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಮಿಚೆಲ್ ಮಾರ್ಷ್ ಕೇವಲ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 90 ರನ್ ಚಚ್ಚಿದರು.
ಕೊನೆಯಲ್ಲಿ ನಿಕೋಲಸ್ ಪೂರನ್ ಕೇವಲ 17 ಎಸೆತಗಳಲ್ಲಿ ಅಜೇಯ 32 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 16.4 ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.



