ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ತಮ್ಮ ಹಠಾತ್ ಟೆಸ್ಟ್ ನಿವೃತ್ತಿಯ ಹಿಂದಿನ ನಿಗೂಢ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡಿದ ಕೊಹ್ಲಿ, ತಂಡದ ಒಳಗಿನ ವಾತಾವರಣ ಮತ್ತು ಗೌರವದ ಕೊರತೆಯೇ ತಮ್ಮ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆ ದಿನಗಳನ್ನು ಸ್ಮರಿಸಿದ ಕೊಹ್ಲಿ, “ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲದ ವಾತಾವರಣದಲ್ಲಿ ನನಗೆ ಮುಂದುವರಿಯಲು ಸಾಧ್ಯವಿರಲಿಲ್ಲ. ನನ್ನ ಯೋಗ್ಯತೆ ಮತ್ತು ತಂಡಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಪದೇ ಪದೇ ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದರೆ, ನಾನು ಆ ಜಾಗದಲ್ಲಿ ಇರಲು ಇಷ್ಟಪಡುವುದಿಲ್ಲ. ಟೆಸ್ಟ್ ಕ್ರಿಕೆಟ್ ತೊರೆಯುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ ಎಲ್ಲದಕ್ಕಿಂತ ಸ್ವಾಭಿಮಾನವೇ ಮುಖ್ಯ” ಎಂದು ನೇರವಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ ಕೊಹ್ಲಿ, “ನಾನು ವೃತ್ತಿಜೀವನದ ಅಂತಹ ಹಂತದಲ್ಲಿದ್ದೇನೆ, ಇಲ್ಲಿ ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ನನಗೆ 2027ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಆಸೆಯಿದೆ. ಆದರೆ ಅದಕ್ಕೊಂದು ಷರತ್ತಿದೆ; ಮ್ಯಾನೇಜ್‌ಮೆಂಟ್ ನನ್ನನ್ನು ಸಂಪೂರ್ಣವಾಗಿ ಗೌರವಿಸಬೇಕು ಮತ್ತು ನನ್ನ ಅವಶ್ಯಕತೆ ಇದೆ ಎಂದು ಭಾವಿಸಿದರೆ ಮಾತ್ರ ನಾನು ಕಣಕ್ಕಿಳಿಯುತ್ತೇನೆ” ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದರೂ, ಐಪಿಎಲ್ 2026 ರಲ್ಲಿ ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕಿಂಗ್ ಕೊಹ್ಲಿ, ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರಿಗೆ ಮೈದಾನದಲ್ಲೇ ತಕ್ಕ ಉತ್ತರ ನೀಡುತ್ತಿದ್ದಾರೆ.



