ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಇಂದು ತಮ್ಮ ನೂತನ ಸಂಪುಟದ ಸಚಿವರಿಗೆ ಖಾತೆಗಳನ್ನುಹಂಚಿಕೆ ಮಾಡಿದ್ದಾರೆ.
ಸಿಎಂ ವಿಜಯ್ ಅವರು ಗೃಹ, ಸಾರ್ವಜನಿಕ ಇಲಾಖೆ, ಸಾಮಾನ್ಯ ಆಡಳಿತ, ಜಿಲ್ಲಾ ಕಂದಾಯ ಅಧಿಕಾರಿಗಳು, ಪೊಲೀಸ್, ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಕಲ್ಯಾಣ, ಯುವಜನ ಕಲ್ಯಾಣ, ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ, ಪೌರಾಡಳಿತ, ನಗರಾಭಿವೃದ್ಧಿ ಹಾಗೂ ನೀರು ಸರಬರಾಜು ಇಲಾಖೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಇನ್ನು ಸಂಪುಟದ ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ಗೆ ಹಣಕಾಸು ಖಾತೆಯನ್ನು ನೀಡಲಾಗಿದೆ. ಹಣಕಾಸು, ಪಿಂಚಣಿ ಮತ್ತು ಪಿಂಚಣಿ ಭತ್ಯೆಗಳ ಇಲಾಖೆಗಳನ್ನು ನಿಭಾಯಿಸಲಿದ್ದಾರೆ.
ಕಿರಿಯ ಸಚಿವೆಯಾದ ಸೆಲ್ವಿ ಎಸ್. ಕೀರ್ತನಾ ಅವರಿಗೆ ಕೈಗಾರಿಕಾ ಇಲಾಖೆಯ ನೀಡಲಾಗಿದ್ದು, ಇದರ ಜೊತೆಗೆ ಹೂಡಿಕೆ ಉತ್ತೇಜನ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಳ್ಳಲಿದ್ದಾರೆ.
ಸಚಿವ ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ಮತ್ತು ಪಂಚಾಯತ್ ಒಕ್ಕೂಟ, ಬಡತನ ನಿರ್ಮೂಲನೆ ಕಾರ್ಯಕ್ರಮ, ಗ್ರಾಮೀಣ ಸಾಲದ ವಿನಾಯಿತಿ ಮತ್ತು ಸಣ್ಣ ನೀರಾವರಿ ಸೇರಿದಂತೆ ನೀರಾವರಿ ಯೋಜನೆಗಳು ಸೇರಿವೆ.
ಆಧವ್ ಅರ್ಜುನಾ ಅವರಿಗೆ ಲೋಕೋಪಯೋಗಿ ಮತ್ತು ಕ್ರೀಡಾ ಇಲಾಖೆ ನೀಡಲಾಗಿದೆ. ಜೊತೆಗೆ ಕಟ್ಟಡಗಳು, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ ಹಾಗೂ ಕ್ರೀಡಾ ಅಭಿವೃದ್ಧಿ ಇಲಾಖೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಡಾ. ಕೆ.ಜಿ. ಅರುಣ್ರಾಜ್ ಅವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪಿ. ವೆಂಕಟರಮಣನ್ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ.
ಆರ್. ನಿರ್ಮಲ್ಕುಮಾರ್ ಅವರಿಗೆ ಇಂಧನ ಸಂಪನ್ಮೂಲ ಮತ್ತು ಕಾನೂನು ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ವಿದ್ಯುತ್ ಮತ್ತು ಸಾಂಪ್ರದಾಯಿಕೇತರ ಇಂಧನ ಅಭಿವೃದ್ಧಿ, ಕಾನೂನು, ನ್ಯಾಯಾಲಯಗಳು, ಜೈಲುಗಳು ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆ, ಶಾಸನಸಭೆ, ರಾಜ್ಯಪಾಲರು, ಚುನಾವಣೆಗಳು ಮತ್ತು ಪಾಸ್ಪೋರ್ಟ್ ಇಲಾಖೆಗಳು ಸೇರಿವೆ.
ರಾಜ್ಮೋಹನ್ ಅವರಿಗೆ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ ಇಲಾಖೆಯ ಹೊಣೆ ನೀಡಲಾಗಿದೆ. ಪುರಾತತ್ವ ಶಾಸ್ತ್ರ, ತಮಿಳು ಅಧಿಕೃತ ಭಾಷೆ ಮತ್ತು ತಮಿಳು ಸಂಸ್ಕೃತಿ, ಚಲನಚಿತ್ರ ತಂತ್ರಜ್ಞಾನ ಮತ್ತು ಚಲನಚಿತ್ರ ಕಾಯ್ದೆ, ಸುದ್ದಿ ಕಾಗದ ನಿಯಂತ್ರಣ, ಲೇಖನ ಸಾಮಗ್ರಿ ಮತ್ತು ಮುದ್ರಣ ಹಾಗೂ ಸರ್ಕಾರಿ ಮುದ್ರಣಾಲಯ ಇಲಾಖೆಗಳ ಉಸ್ತುವಾರಿ ವಹಿಸಲಾಗಿದೆ.
ಡಾ. ಟಿ.ಕೆ. ಪ್ರಭುಗೆ ನೈಸರ್ಗಿಕ ಸಂಪನ್ಮೂಲ ಖಾತೆ ನೀಡಲಾಗಿದ್ದು , ಖನಿಜಗಳು ಮತ್ತು ಗಣಿ ಇಲಾಖೆಗಳನ್ನು ನಿಭಾಯಿಸಲಿದ್ದಾರೆ.



