September 28, 2026
Monday, September 28, 2026
spot_img

ʼಕಾಲು ಹಿಡಿತೀನಿ, ಒಂದು ಪ್ಯಾಕೆಟ್ ಗಾಂಜಾ ಕೊಡಿಸಿʼ ಎಂದು ಮೊಬೈಲ್ ಟವರ್ ಏರಿ ಯುವಕನ ಹೈಡ್ರಾಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:


ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಗಾಂಜಾ ಪ್ಯಾಕೆಟ್ ನೀಡುವಂತೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಡೆದಿದೆ.

ಹನುಮಂತು ಎಂಬ ಯುವಕ ಟವರ್ ಏರಿ ಜೋರಾಗಿ ಕೂಗಾಡಲು ಪ್ರಾರಂಭಿಸಿದಾಗ ಸುತ್ತಮುತ್ತಲಿನ ನಿವಾಸಿಗಳ ಗಮನ ಸೆಳೆದಿದ್ದಾನೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ ಅಧಿಕಾರಿಗಳು ಮತ್ತು ಸ್ಥಳೀಯರ ಬಳಿ ತೆಲುಗಿನಲ್ಲಿ, ನಿಮ್ಮ ಕಾಲಿಗೆ ಬೀಳುತ್ತೇನೆ ಸರ್… ದಯವಿಟ್ಟು ನನಗೊಂದು ಗಾಂಜಾ ಪ್ಯಾಕೆಟ್ ಕೊಡಿಸಿ ಸರ್ ಎಂದು ಪದೇ ಪದೇ ಗೋಗರೆದಿದ್ದಾನೆ.

ಯುವಕ ಎಲ್ಲಿ ಮೇಲಿಂದ ಜಿಗಿದುಬಿಡುತ್ತಾನೋ ಎಂಬ ಭಯದಿಂದ ಸ್ಥಳೀಯರು ಟವರ್ ಬಳಿ ಜಮಾಯಿಸಿದ್ದರಿಂದ, ಈ ವಿಚಿತ್ರ ದೃಶ್ಯವು ನೋಡನೋಡುತ್ತಿದ್ದಂತೆ ತೀವ್ರ ಆತಂಕ ಸೃಷ್ಟಿಸಿತು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊಗಳಲ್ಲಿ, ಹನುಮಂತು ಅಪಾಯಕಾರಿ ಎತ್ತರದಲ್ಲಿ ಕುಳಿತು ಕೂಗಾಡುತ್ತಾ, ಕೆಳಗಿಳಿಯಲು ನಿರಾಕರಿಸುತ್ತಿರುವುದು ಕಂಡುಬಂದಿದೆ.

ವಿಷಯ ತಿಳಿದ ತಕ್ಷಣ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಮನವೊಲಿಸುವ ಪ್ರಯತ್ನ ಆರಂಭಿಸಿದರು.

ದೀರ್ಘಾವಧಿಯ ಕೌನ್ಸೆಲಿಂಗ್ ಮತ್ತು ಸಂಧಾನದ ನಂತರ, ಪೊಲೀಸರು ಆತನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ನಂತರ ಆತನನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಯುವಕ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಅಥವಾ ಮಾದಕ ದ್ರವ್ಯದ ವ್ಯಸನಕ್ಕೆ ಒಳಗಾಗಿದ್ದ ಇಂತಹ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Must Read