August 6, 2026
Thursday, August 6, 2026
spot_img

ಬೀದಿ ವ್ಯಾಪಾರಿಗಳ ಮೇಲಿನ ದೌರ್ಜನ್ಯ ಖಂಡನೀಯ: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅನ್ಯಾಯ ಖಂಡನೀಯ ಇದನ್ನು ನೋಡಿದಾಗ, 1976 ರಲ್ಲಿ ದೆಹಲಿಯಲ್ಲಿ ನಡೆದ ತುರ್ಕ್‌ಮನ್ ಗೇಟ್ ಘಟನೆಯ ನೆನಪು ಬರುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಸುಪುತ್ರ ಸಂಜಯ್ ಗಾಂಧಿಯವರು ಸುಮಾರು 25,000 ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ತೆರವುಗೊಳಿಸಿ ಲಕ್ಷಾಂತರ ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನಡೆದ ಅನ್ಯಾಯವನ್ನು ದೇಶ ಎಂದಿಗೂ ಮರೆತಿಲ್ಲ ಎಂದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದೌರ್ಜನ್ಯವೂ ಅದೇ ರೀತಿಯ ನೋವನ್ನು ಉಂಟು ಮಾಡುತ್ತಿದೆ. ಬಡವರ ಜೀವನೋಪಾಯದ ಮೇಲೆಯೇ ಹೊಡೆತ ನೀಡಲಾಗಿದೆ. ಸುಮಾರು 2.5 ಲಕ್ಷ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಅಂದಾಜು 10 ಲಕ್ಷ ಜನರ ಬದುಕಿನ ಆಧಾರವನ್ನು ಕಸಿದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.

ಈ ಬೀದಿ ವ್ಯಾಪಾರಿಗಳಲ್ಲಿ ಸುಮಾರು ಶೇ. 60ರಷ್ಟು ಮಹಿಳೆಯರಿದ್ದಾರೆ. ಇವರಲ್ಲಿ ಅನೇಕರು ರೈತ ಕುಟುಂಬಗಳಿಗೆ ಸೇರಿದ್ದು, ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ನಗರಗಳಿಗೆ ತಂದು ಬೆಳಗ್ಗೆಯಿಂದಲೇ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಮತ ಬೇಕಾದಾಗ ಮಾತ್ರ ದೀನದಲಿತರು, ಬಡವರು ಮತ್ತು ಹಿಂದುಳಿದ ವರ್ಗದ ಜನರು ನೆನಪಾಗುತ್ತಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೀದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಪಿಎಂ ಸ್ವನಿಧಿ ಯೋಜನೆ ಜಾರಿಗೆ ತಂದರು. ದೇಶಾದ್ಯಂತ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ, ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸುವ ಐತಿಹಾಸಿಕ ಕಾರ್ಯವನ್ನು ಮಾಡಿದರು. ಈ ಯೋಜನೆಯಡಿ ದೇಶದಾದ್ಯಂತ ಸುಮಾರು 75 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿಗೆ 17,800 ಕೋಟಿಗೂ ಅಧಿಕ ಸಾಲ ನೀಡಲಾಗಿದೆ.

ಕರ್ನಾಟಕದಲ್ಲಿಯೂ ಪಿಎಂ ಸ್ವನಿಧಿ ಯೋಜನೆಯಡಿ ಸುಮಾರು 3 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಇದಲ್ಲದೇ ಮೋದಿ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಸಹ ಒದಗಿಸುತ್ತಿದೆ. ಈ ವ್ಯಾಪಾರಿಗಳಲ್ಲಿ ಸುಮಾರು ಶೇ. 50 ರಷ್ಟು ಜನರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ತಮ್ಮನ್ನು ಹಿಂದುಳಿದ ವರ್ಗಗಳ ಪರ ಹೋರಾಟಗಾರರೆಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರದ ಹಾಗೂ ಸಚಿವ ಜಮೀರ್ ಅಹಮದ್‌ಖಾನ್ ಅವರಿಗೆ ಮತ ಬೇಕಾದಾಗ ಮಾತ್ರ ದಲಿತರು, ಬಡವರು ಮತ್ತು ದೀನದಲಿತರು ನೆನಪಾಗುತ್ತಾರೆಯೇ? ಇಂದು ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮಾತನಾಡಲು ನಿಮಗೆ ಸ್ವಲ್ಪ ಸಮಯವೂ ಸಿಗುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದೇ ರೀತಿಯ ದೌರ್ಜನ್ಯ ಮುಂದುವರಿದರೆ ದೀನದಲಿತರು, ಬಡವರು ಮತ್ತು ಶ್ರಮಜೀವಿಗಳು ಪ್ರಜಾಪ್ರಭುತ್ವದ ಮೂಲಕ ನಿಮಗೆ ಸೂಕ್ತ ಉತ್ತರ ನೀಡಲಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು. ಅವರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಂಡು, ಅವರಿಗೆ ಅಗತ್ಯವಾದ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲವನ್ನು ಸರ್ಕಾರ ಒದಗಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !