May 17, 2026
Sunday, May 17, 2026
spot_img

ಬೆಳಗಾವಿಯ 4,500 ಕೋಟಿ ರೂ. ವಂಚನೆ ಪ್ರಕರಣ: ಕೃತ್ಯದ ಹಿಂದೆ ಬ್ಯಾಂಕ್ ಅಧಿಕಾರಿಗಳ ನೆರಳು?

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣದ ತನಿಖೆಗೆ ಈಗಾಗಲೇ ಸಿಐಡಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. 35 ಸಾವಿರಕ್ಕೂ ಹೆಚ್ಚು ಜನರಿಂದ ಹೂಡಿಕೆ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಆದರೆ ಶಿವಾನಂದ ನೀಲಣ್ಣವರ್ನ ಖಾಸಗಿ ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಂತರ ರೂ. ಪತ್ತೆಯಾಗಿದ್ರು ವಹಿವಾಟುಗಳ ಬಗ್ಗೆ ಬ್ಯಾಂಕ್ ಮೌನ ವಹಿಸಿದ್ದೇಕೆ? ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕಾರಾಣವಾಗಿದೆ.

ಖಾಸಗಿ ಬ್ಯಾಂಕ್ ನಾಲ್ಕು ಪ್ರಮುಖ ಖಾತೆಗಳನ್ನು ತನಿಖಾಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ಈ ಒಂದೊಂದು ಖಾತೆಯಲ್ಲೂ ನೂರಾರು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಈ ಖಾತೆಗಳಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ಜಮೆಯಾಗುತ್ತಿತ್ತು. ಅಚ್ಚರಿಯ ವಿಷಯವೆಂದರೆ, ಇದೇ ಖಾತೆಗಳಿಂದ ತಿಂಗಳಿಗೆ 75 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಹೂಡಿಕೆದಾರರಿಗೆ ಬಡ್ಡಿ ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ:

ನಿಯಮಾವಳಿಗಳ ಪ್ರಕಾರ ಹಣಕಾಸು ಗುಪ್ತಚರ ಘಟಕ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಬ್ಯಾಂಕ್ ವರದಿ ಮಾಡಬೇಕಿತ್ತು. ಕೋಟ್ಯಂತರ ರೂಪಾಯಿ ವ್ಯವಹಾರದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಎಚ್ಚರಿಕೆ ಕ್ರಮ ಕೈಗೊಳ್ಳದಿರಲು ಶಿವಾನಂದ ನೀಲಣ್ಣವರ್ ಜೊತೆಗಿನ ಒಳಸಂಚು ಕಾರಣವೇ ಎಂಬ ದಿಕ್ಕಿನಲ್ಲಿ ಸಿಐಡಿ ಮಾಹಿತಿ ಕಲೆಹಾಕುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ಲ್ಯಾಪ್ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್ ಹಾಗೂ ಆನ್ಲೈನ್ ವ್ಯವಹಾರಗಳ ಡಿಜಿಟಲ್ ದಾಖಲೆಗಳ ಬಗ್ಗೆ ವಿಶೇಷವಾಗಿ ಮಾಹಿತಿ ಪಡೆಯಲಾಗುತ್ತಿದೆ. ಸಭೆ ಮುಕ್ತಾಯವಾದ ತಕ್ಷಣವೇ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಸಿಐಡಿ ಅಧಿಕೃತವಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಬಹುಕೋಟಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ರಾಜ್ಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಿಐಡಿ ತನಿಖೆಯಿಂದ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಮೂಡಿದೆ. ಸಿಐಡಿ ತನಿಖೆ ತೀವ್ರಗೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಈ ಜಾಲದಲ್ಲಿ ಭಾಗಿಯಾಗಿರುವ ಬ್ಯಾಂಕ್ ಅಧಿಕಾರಿಗಳ ಕಳ್ಳಾಟವೂ ಬಯಲಾಗುವ ಸಾಧ್ಯತೆ ದಟ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !