ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣಿಕರ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನೂತನ ದ್ವೈಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಲಾಗಿದೆ.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಬೆಂಗಳೂರು ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ವಾರದಲ್ಲಿ ಎರಡು ದಿನ ಸಂಚರಿಸಲಿರುವ ಈ ನೇರ ರೈಲು ಸೇವೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭಾಗವಹಿಸಿ ಹಸಿರು ನಿಶಾನೆ ತೋರಿದರು. ನೈಋತ್ಯ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ವಲಯಗಳ ಸಹಯೋಗದಲ್ಲಿ ಈ ಹೊಸ ಸೇವೆ ಆರಂಭವಾಗಿದೆ.
ಪ್ರಮುಖ ನಗರಗಳಿಗೆ ವೇಗದ ಸಂಪರ್ಕ
ಹೊಸ ರೈಲು ಸೇವೆ ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಪ್ರಮುಖ ಏಳು-ಎಂಟು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಲಿದೆ. ಇದರಿಂದ ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣ ಸಮಯ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ವೇಗದ ಸಂಪರ್ಕ ಸಿಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಉದ್ಯಮ, ಶಿಕ್ಷಣ ಮತ್ತು ಉದ್ಯೋಗ ಕಾರಣಗಳಿಂದ ಈ ಮಾರ್ಗದಲ್ಲಿ ನಿರಂತರ ಪ್ರಯಾಣ ಮಾಡುವವರಿಗೆ ಈ ಸೇವೆ ಅನುಕೂಲಕರವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:
ಕೋವಿಡ್ ಬಳಿಕ ಸ್ಥಗಿತಗೊಂಡ ರೈಲುಗಳಿಗೂ ಮರುಚಾಲನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ 37 ರೈಲುಗಳ ಸಂಚಾರವನ್ನು ಪುನರಾರಂಭಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಹೇಳಿದರು. ಕೊರೊನಾ ಮಹಾಮಾರಿಯ ನಂತರ ಹಂತ ಹಂತವಾಗಿ ರೈಲು ಸೇವೆಗಳನ್ನು ಪುನರಾರಂಭಿಸಲಾಗುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೊಸ ಸೇವೆಗಳನ್ನೂ ಪರಿಚಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಚಿವರು ಹೇಳಿದರು. ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಿದ ಬಳಿಕ ರೈಲ್ವೆ ಇಲಾಖೆಗೆ ದಾಖಲೆಯ ಪ್ರಮಾಣದಲ್ಲಿ ಅನುದಾನ ಲಭ್ಯವಾಗಿದೆ ಎಂದರು. ಪ್ರಸ್ತುತ ದೇಶದಾದ್ಯಂತ ರೈಲ್ವೆ ಆಧುನೀಕರಣ, ಹಳಿ ವಿಸ್ತರಣೆ, ಸುರಕ್ಷತಾ ವ್ಯವಸ್ಥೆ ಮತ್ತು ವಿದ್ಯುದೀಕರಣ ಕಾಮಗಾರಿಗಳಿಗೆ ವೇಗ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ವೇಗ ಪಡೆದ ರೈಲ್ವೆ ಯೋಜನೆಗಳು
ರಾಜ್ಯದಲ್ಲಿ ಪ್ರಸ್ತುತ ಸುಮಾರು 3,84೦ ಕಿಲೋಮೀಟರ್ ಉದ್ದದ ವಿವಿಧ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು. 2014ರಿಂದ ಈವರೆಗೆ ರಾಜ್ಯದಲ್ಲಿ ಸುಮಾರು 3,742 ಕಿಲೋಮೀಟರ್ ರೈಲು ಮಾರ್ಗಗಳ ವಿದ್ಯುದೀಕರಣ ಪೂರ್ಣಗೊಂಡಿದ್ದು, ಒಟ್ಟು ಕಾಮಗಾರಿಗಳಲ್ಲಿ ಶೇಕಡ 97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು.



