ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಹಲೋಂಗಾಫರ್ ಗಿಬ್ಬನ್ ಅಭಯಾರಣ್ಯದಲ್ಲಿ ನಡೆದ ಅಪರೂಪದ ಘಟನೆ ಇದೀಗ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
ಭಾರತದ ಏಕೈಕ ವಾನರ ತಳಿಯಾದ ವೆಸ್ಟರ್ನ್ ಹೂಲಾಕ್ ಗಿಬ್ಬನ್, ರೈಲ್ವೆ ಹಳಿಯ ಮೇಲೆ ನಿರ್ಮಿಸಲಾದ ವಿಶೇಷ ‘ಕ್ಯಾನೋಪಿ ಬ್ರಿಡ್ಜ್’ ಬಳಸಿರುವ ದೃಶ್ಯ ಸೆರೆಯಾಗಿದ್ದು, ಇದು ವಿಶ್ವದಲ್ಲೇ ಇದು ಮೊದಲ ದಾಖಲೆ ಎಂದು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ತಿಳಿಸಿದೆ.
ವಿಶೇಷ ಸೇತುವೆ
ಮರದಿಂದ ಮರಕ್ಕೆ ಸಂಚರಿಸುವ ಈ ಅಪರೂಪದ ವಾನರಗಳು ಸಾಮಾನ್ಯವಾಗಿ ನೆಲದ ಮೇಲೆ ಇಳಿಯುವುದಿಲ್ಲ. ಆದರೆ ಕಾಡಿನ ಮಧ್ಯೆ ಹಾದುಹೋಗಿರುವ ರೈಲ್ವೆ ಮಾರ್ಗ ಮತ್ತು ವಿದ್ಯುತ್ ತಂತಿಗಳಿಂದ ಅವುಗಳ ಸಂಚಾರಕ್ಕೆ ದೊಡ್ಡ ಅಡ್ಡಿ ಉಂಟಾಗಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವಿಶೇಷ ಸೇತುವೆ ನಿರ್ಮಿಸಿತ್ತು.
ಇದನ್ನೂ ಓದಿ:
ರೈಲ್ವೆ ಹಳಿಯ ಎರಡೂ ಬದಿಯ ಮರಗಳನ್ನು ಸಂಪರ್ಕಿಸುವ ರೀತಿಯಲ್ಲಿ ಈ ಕ್ಯಾನೋಪಿ ಬ್ರಿಡ್ಜ್ ವಿನ್ಯಾಸ ಮಾಡಲಾಗಿದೆ. ಸುರಕ್ಷತಾ ಜಾಲಗಳ ಸಹಾಯದಿಂದ ಗಿಬ್ಬನ್‌ಗಳು ಯಾವುದೇ ಅಪಾಯವಿಲ್ಲದೆ ಸಂಚರಿಸಬಹುದು.
ಒಂದು ಗಂಡು ಗಿಬ್ಬನ್ ಈ ಸೇತುವೆ ದಾಟುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಇದು ಐತಿಹಾಸಿಕ ಹೆಜ್ಜೆ ಎಂದು ತಜ್ಞರು ಹೇಳಿದ್ದಾರೆ. ಅಭಿವೃದ್ಧಿ ಮತ್ತು ವನ್ಯಜೀವಿ ರಕ್ಷಣೆ ಜೊತೆಯಾಗಿ ಸಾಗಬಹುದು ಎಂಬುದಕ್ಕೆ ಈ ಯೋಜನೆ ಉತ್ತಮ ಉದಾಹರಣೆಯಾಗಿದೆ.



