ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕ್ಕೆ ಮತ್ತೆ ಹೊಸ ವೈರಸ್ ಭೀತಿ ಶುರುವಾಗಿದ್ದು, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾದಲ್ಲಿ ಬಂಡಿಬುಗ್ಯೋ ತಳಿಯ ಎಬೋಲಾ ವೈರಸ್ ಗೆ 87 ಜನರನ್ನು ಸಾವನ್ನಪ್ಪಿದ್ದಾರೆ.
ಈ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಕಾಂಗೋ ಮತ್ತು ಉಗಾಂಡಾದಲ್ಲಿ ಅತೀ ಹೆಚ್ಚು ವೈರಸ್
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದ್ದು, ಕಾಂಗೋ ಮತ್ತು ಉಗಾಂಡಾದಲ್ಲಿ ಬಂಡಿಬುಗ್ಯೋ ತಳಿಯ ಎಬೋಲಾ ಸೋಂಕು ಹೆಚ್ಚಾಗಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದೆ.
ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಳ
ಕಾಂಗೋದ ಪೂರ್ವ ಇಟುರಿ ಪ್ರಾಂತ್ಯದಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಕಾರ್ಯಕರ್ತರು ವೈರಸ್ ಹರಡುವಿಕೆಯನ್ನು ತಡೆಯಲು ಹರಸಾಹಸ ಪಡುತ್ತಿದ್ದಾರೆ. ಸ್ಕ್ರೀನಿಂಗ್ ಮತ್ತು ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಮೊಂಗ್ವಾಲು ಹೆಲ್ತ್ ಜೋನ್‌ನಲ್ಲಿ ಮೊದಲ ಕೇಸ್
ಆಫ್ರಿಕಾ ಸಿಡಿಸಿ ಡೈರೆಕ್ಟರ್ – ಜನರಲ್ ಡಾ. ಜೀನ್ ಕಸೇಯಾ ಮಾಹಿತಿ ನೀಡುತ್ತಾ, ಮೊದಲಿಗೆ ಇಟುರಿಯ ಜನನಿಬಿಡ ಗಣಿಗಾರಿಕೆ ಪ್ರದೇಶವಾದ ಮೊಂಗ್ವಾಲು ಹೆಲ್ತ್ ಜೋನ್‌ನಲ್ಲಿ ಪ್ರಕರಣ ದೃಢಪಟ್ಟಿದೆ. ಇಲ್ಲಿನ ರೋಗಿಗಳು ಚಿಕಿತ್ಸೆಗಾಗಿ ಬೇರೆ ಪ್ರದೇಶಕ್ಕೆ ತೆರಳಿದ ಕಾರಣ ರವಾಂಪರಾ ಮತ್ತು ಬುನಿಯಾ ಪ್ರದೇಶಗಳಿಗೂ ಸೋಂಕು ಹರಡಿದೆ ಎಂದು ತಿಳಿಸಿದ್ದಾರೆ.
87 ಸಾವುಗಳ ಪೈಕಿ, ಮೊಂಗ್ವಾಲುವಿನಲ್ಲಿ 57, ರವಾಂಪರಾದಲ್ಲಿ 27 ಮತ್ತು ಬುನಿಯಾದಲ್ಲಿ 3 ಸಾವುಗಳು ಸಂಭವಿಸಿವೆ. ಮೊಂಗ್ವಾಲುವಿನಲ್ಲಿ ಅನೇಕ ಸೋಂಕಿತರು ಇದ್ದು, ಸಂಪರ್ಕಿತರನ್ನು ಪತ್ತೆಹಚ್ಚುವುದು ದೊಡ್ಡ ಸಾಹಸವೇ ಆಗಿದೆ ಎಂದು ಕಸೇಯಾ ಹೇಳಿದ್ದಾರೆ.
ಎಬೋಲಾ ವೈರಸ್ ಹೇಗೆ ಹರಡುತ್ತೆ?
ಎಬೋಲಾ ವೈರಸ್ ರಕ್ತ, ವಾಂತಿ ಮತ್ತು ವೀರ್ಯದಂತಹ ದೈಹಿಕ ದ್ರವಗಳ ಮೂಲಕ ಹರಡುತ್ತದೆ.ಇದು ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. 1976 ರಲ್ಲಿ ಮೊದಲ ಬಾರಿಗೆ ಕಾಂಗೋದಲ್ಲಿ ಎಬೋಲಾ ಕಾಣಿಸಿಕೊಂಡಿತ್ತು.



