November 10, 2026
Tuesday, November 10, 2026
spot_img

‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’: ಸೋನಿಯಾ ಗಾಂಧಿ ಜೀವನದ ಏಳುಬೀಳುಗಳ ಕಥೆ ಈಗ ಪುಸ್ತಕ ರೂಪದಲ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಏಳುಬೀಳುಗಳನ್ನು ಒಳಗೊಂಡ ಬಹುನಿರೀಕ್ಷಿತ ಆತ್ಮಕಥೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” (Belonging: A Journey of Love) ಇಂದು ನವೆಂಬರ್ 10ರ ಮಂಗಳವಾರದಂದು ದೇಶಾದ್ಯಂತ ಬಿಡುಗಡೆಯಾಗಿದೆ.

 ಪ್ರಕಾಶನ ಸಂಸ್ಥೆ ಹಾರ್ಪರ್‌ ಕಾಲಿನ್ಸ್‌ ಇಂಡಿಯಾ ಪ್ರಕಟಿಸಿರುವ ಈ ಪುಸ್ತಕದಲ್ಲಿ, 2004ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಗೆದ್ದಾಗ ತಮಗೆ ಒಲಿದು ಬಂದಿದ್ದ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಆ ಒಂದು ರಾತ್ರಿಯ ರೋಮಾಂಚಕ ಮತ್ತು ನಿರ್ಣಾಯಕ ನಿರ್ಧಾರದ ರಹಸ್ಯವನ್ನು ಸೋನಿಯಾ ಗಾಂಧಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಪ್ರಸಿದ್ಧ ಪುಸ್ತಕ ಮಳಿಗೆಗಳಾದ ಬ್ಲಾಸಮ್ಸ್ ಮತ್ತು ಬುಕ್‌ವರ್ಮ್ ಸೇರಿದಂತೆ ದೇಶದ ಪ್ರಮುಖ ನಗರಗಳ ಬುಕ್‌ಸ್ಟೋರ್‌ಗಳಲ್ಲಿ ಈ ಪುಸ್ತಕ ಇಂದಿನಿಂದ ಮಾರಾಟಕ್ಕೆ ಸಿಗುತ್ತಿದೆ.

“ಹುದ್ದೆಯನ್ನು ಇಲ್ಲಗೇ ಬಿಟ್ಟುಬಿಡು!”

ಪುಸ್ತಕ ಬಿಡುಗಡೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಕೆಲವು ಪ್ರಮುಖ ಸಾಲುಗಳನ್ನು ಹಂಚಿಕೊಂಡಿರುವ ಸೋನಿಯಾ, ಪ್ರಧಾನಿ ಹುದ್ದೆ ನಿರಾಕರಿಸುವ ಮುನ್ನ ತಮ್ಮ ಮನಸ್ಸಿನಲ್ಲಿದ್ದ ಗೊಂದಲಗಳು ಹೇಗೆ ದೂರಾದವು ಎಂಬುದನ್ನು ಬರೆದುಕೊಂಡಿದ್ದಾರೆ.

“ಆ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿದ್ದ ಕಡೆಯ ಅನುಮಾನದ ಸಣ್ಣ ಎಳೆಗಳೂ ಮಾಯವಾದವು. ‘ಸೋನಿಯಾ, ನಿನ್ನ ಆತ್ಮಸಾಕ್ಷಿಗೆ ನೀನು ಪ್ರಾಮಾಣಿಕವಾಗಿರು. ನಿನಗೆ ಇದು ಮೊದಲೇ ತಿಳಿದಿತ್ತು. ಇದನ್ನು ಇಲ್ಲಗೇ ಬಿಟ್ಟುಬಿಡು!’ ಎಂದು ನನ್ನೊಳಗಿನ ಧ್ವನಿ ಹೇಳುತ್ತಿರುವುದು ನನಗೇ ಕೇಳಿಸಿತು” ಎಂದು ಅವರು ನೆನಪಿಸಿಕೊಂಡಿದ್ದಾರೆ.

ಬಾಗಿಲು ತಟ್ಟಿದಾಗ ಮಗ ರಾಹುಲ್ ಗಾಂಧಿ ಕೊಟ್ಟ ಪ್ರತಿಕ್ರಿಯೆ

ಆ ನಿರ್ಧಾರ ಕೈಗೊಂಡ ತಕ್ಷಣ ಮುಂಜಾನೆ ನಡೆದ ಘಟನೆಯನ್ನು ಸೋನಿಯಾ ಗಾಂಧಿ ಪುಸ್ತಕದಲ್ಲಿ ಅತ್ಯಂತ ಭಾವನಾತ್ಮಕವಾಗಿ ವಿವರಿಸಿದ್ದಾರೆ. ನಾನು ನಿದ್ದೆಯಿಂದ ಎದ್ದು ನೇರವಾಗಿ ನನ್ನ ಮಗನ (ರಾಹುಲ್ ಗಾಂಧಿ) ಕೋಣೆಗೆ ಹೋಗಿ ಬಾಗಿಲು ತಟ್ಟಿದೆ. ‘ನಾನು ನನ್ನ ನಿರ್ಧಾರ ಮಾಡಿದ್ದೇನೆ. ನನ್ನ ನಿಲುವಿಗೆ ನಾನು ಬದ್ಧಳಾಗಿರುತ್ತೇನೆ’ ಎಂದು ಅವನಿಗೆ ತಿಳಿಸಿದೆ. “ಅದನ್ನು ಕೇಳಿದ ತಕ್ಷಣ ಅವನು ನನ್ನ ಬಳಿ ಬಂದು, ನನ್ನ ಹೆಗಲ ಮೇಲೆ ಕೈಹಾಕಿ ಅಪ್ಪಿಕೊಂಡು, ‘ಅಮ್ಮ, ನೀನು ತೆಗೆದುಕೊಂಡಿರುವುದು ಅತ್ಯಂತ ಸರಿಯಾದ ನಿರ್ಧಾರ’ ಎಂದು ಹೆಮ್ಮೆಯಿಂದ ಹೇಳಿದನು.

ಅದಾದ ಬಳಿಕ ತಾವು ಸಂಸತ್ ಭವನದ ಸಭಾಂಗಣ ಪ್ರವೇಶಿಸಿದಾಗ ನೆರೆದಿದ್ದ ನಾಯಕರು ಮತ್ತು ಸಂಸದರು ಮೇಜುಗಳನ್ನು ತಟ್ಟುತ್ತಾ ಭವ್ಯವಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದ ಕ್ಷಣಗಳನ್ನೂ ಅವರು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.

ಇದನ್ನೂ ಓದಿ:

ಇಟಲಿಯ ಬಾಲ್ಯದಿಂದ ಕೇಂಬ್ರಿಡ್ಜ್ ಪ್ರೇಮಕಥೆಯವರೆಗೆ…

ಈ ಪುಸ್ತಕವು ಕೇವಲ ರಾಜಕೀಯಕ್ಕೆ ಸೀಮಿತವಾಗಿರದೆ, ಅವರ ವೈಯಕ್ತಿಕ ಜೀವನದ ಮಹತ್ವದ ತಿರುವುಗಳನ್ನು ಅನಾವರಣಗೊಳಿಸುತ್ತದೆ. ಇಟಲಿಯಲ್ಲಿ ಜನಿಸಿದ ಸೋನಿಯಾ ಅವರು 1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ 19 ವರ್ಷದ ವಿದ್ಯಾರ್ಥಿನಿಯಾಗಿದ್ದಾಗ ರಾಜೀವ್ ಗಾಂಧಿ ಅವರನ್ನು ಭೇಟಿಯಾದರು. ಆ ದಿನಗಳ ಸುಂದರ ಪ್ರೇಮಕಥೆ ಮತ್ತು ಫೆಬ್ರವರಿ 25, 1968 ರಂದು ನಡೆದ ಅವರ ವಿವಾಹದ ದಿನಗಳನ್ನು ಪುಸ್ತಕ ಒಳಗೊಂಡಿದೆ. ತಮ್ಮ ಅತ್ತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪತಿ ರಾಜೀವ್ ಗಾಂಧಿ ಅವರ ಭೀಕರ ಹತ್ಯೆಗಳಂತಹ ಘೋರ ವೈಯಕ್ತಿಕ ದುರಂತಗಳು, ತಮ್ಮನ್ನು ಮಗಳಂತೆ ಸ್ವೀಕರಿಸಿದ ಭಾರತ ದೇಶದೊಂದಿಗಿನ ಒಡನಾಟ ಮತ್ತು ಸಂಬಂಧವನ್ನು ಹೇಗೆ ರೂಪಿಸಿದವು ಎಂಬುದನ್ನು ಅವರು ಭಾವುಕರಾಗಿ ಚಿತ್ರಿಸಿದ್ದಾರೆ.

Must Read

Skip to toolbar