May 19, 2026
Tuesday, May 19, 2026
spot_img

ಡಿಜಿಟಲ್ ಯುಗದಲ್ಲಿ ಪರ್ಫೆಕ್ಟ್ ಪೇರೆಂಟಿಂಗ್: ಮಕ್ಕಳನ್ನು ಟಿವಿ, ಮೊಬೈಲ್ ಅಡಿಕ್ಷನ್‌ನಿಂದ ಮುಕ್ತಗೊಳಿಸಿ!

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಟಿವಿ ಮತ್ತು ಮೊಬೈಲ್ ಸ್ಕ್ರೀನ್‌ಗಳಿಂದ ದೂರ ಇಡುವುದು ಪೋಷಕರಿಗೆ ಒಂದು ದೊಡ್ಡ ಸವಾಲಾಗಿದೆ. ಆದರೆ, ಮಕ್ಕಳ ಆರೋಗ್ಯಕರ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಅನಿವಾರ್ಯ. ಅತಿಯಾದ ಟಿವಿ ವೀಕ್ಷಣೆಯು ಮಕ್ಕಳ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಅವರ ಮೆದುಳಿನ ಬೆಳವಣಿಗೆ, ಮಾತನಾಡುವ ಕೌಶಲ್ಯ ಮತ್ತು ಏಕಾಗ್ರತೆಯ ಮೇಲೂ ಗಂಭೀರವಾದ ದುಷ್ಪರಿಣಾಮಗಳನ್ನು ಬೀರುತ್ತದೆ. ಆರಂಭದಲ್ಲಿ ಮಕ್ಕಳಿಗೆ ಮನರಂಜನೆ ನೀಡುವಂತೆ ಕಾಣುವ ಈ ಸ್ಕ್ರೀನ್‌ಗಳು, ನಿಧಾನವಾಗಿ ಅವರ ಸೃಜನಶೀಲತೆ ಮತ್ತು ಸಾಮಾಜಿಕವಾಗಿ ಬೆರೆಯುವ ಗುಣವನ್ನು ಕುಂಠಿತಗೊಳಿಸುತ್ತವೆ. ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಮತ್ತು ಅವರನ್ನು ಟಿವಿಯಿಂದ ಏಕೆ ದೂರ ಇಡಬೇಕು ಎಂಬುದರ ಬಗ್ಗೆ ತಿಳಿಯೋಣ

ಮಕ್ಕಳನ್ನು ಟಿವಿಯಿಂದ ಏಕೆ ದೂರ ಇಡಬೇಕು ಗೊತ್ತಾ?

ಮಗುವಿನ ಮೊದಲ 3-5 ವರ್ಷಗಳ ಅವಧಿಯಲ್ಲಿ ಮೆದುಳು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಈ ಸಮಯದಲ್ಲಿ ಮಕ್ಕಳು ಪರಿಸರವನ್ನು ನೋಡಿ, ವಸ್ತುಗಳನ್ನು ಮುಟ್ಟಿ ಮತ್ತು ಜನರೊಂದಿಗೆ ಮಾತನಾಡಿ ಕಲಿಯಬೇಕು. ಆದರೆ ಟಿವಿಯಲ್ಲಿ ಕೇವಲ ಏಕಮುಖ ಸಂವಹನ ಇರುವುದರಿಂದ ಮಗುವಿನ ಯೋಚನಾ ಶಕ್ತಿ ಮತ್ತು ಸೃಜನಶೀಲತೆ ಕಡಿಮೆಯಾಗುತ್ತದೆ.

ಯಾವ ಮಕ್ಕಳು ದಿನದಲ್ಲಿ 2 ಗಂಟೆಗಿಂತ ಹೆಚ್ಚು ಸಮಯ ಟಿವಿ ಅಥವಾ ಮೊಬೈಲ್ ವೀಕ್ಷಿಸುತ್ತಾರೋ, ಅವರಲ್ಲಿ ಮಾತು ತಡವಾಗುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಟಿವಿಯಲ್ಲಿ ಬರುವ ಶಬ್ದಗಳು ಮತ್ತು ದೃಶ್ಯಗಳು ಮಗುವಿಗೆ ಭಾಷೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಉಚ್ಚರಿಸಲು ಬಿಡುವುದಿಲ್ಲ.

ಟಿವಿ ಕಾರ್ಟೂನ್‌ಗಳಲ್ಲಿ ದೃಶ್ಯಗಳು ಮತ್ತು ಬಣ್ಣಗಳು ಸೆಕೆಂಡ್‌ಗೊಮ್ಮೆ ಅತ್ಯಂತ ವೇಗವಾಗಿ ಬದಲಾಗುತ್ತವೆ. ಇದಕ್ಕೆ ಮಗುವಿನ ಮೆದುಳು ಒಗ್ಗಿಕೊಂಡರೆ, ನಿಜ ಜೀವನದ ನಿಧಾನಗತಿಯ ಚಟುವಟಿಕೆಗಳು ಅವರಿಗೆ ಬೇಸರ ತರಿಸುತ್ತವೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಮತ್ತು ಟಿವಿ ಬಂದ್ ಮಾಡಿದಾಗ ಅತಿಯಾಗಿ ಹಠ ಮಾಡುವ ಹಾಗೂ ಸಿಟ್ಟುಗೊಳ್ಳುವ ಪ್ರವೃತ್ತಿ ಬೆಳೆಯುತ್ತದೆ.

ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಟಿವಿ ನೋಡುವುದರಿಂದ ಮಕ್ಕಳಲ್ಲಿ ದೈಹಿಕ ಚಟುವಟಿಕೆ ಇಲ್ಲದಂತಾಗಿ ಬಾಲ್ಯದ ಬಾರೀ ತೂಕ ಹೆಚ್ಚಾಗುತ್ತದೆ. ಇದರೊಂದಿಗೆ ಸಣ್ಣ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ದೋಷ ಬರುವುದು ಮತ್ತು ರಾತ್ರಿ ತಡವಾಗಿ ಮಲಗುವುದರಿಂದ ನಿದ್ರಾಹೀನತೆಯ ಸಮಸ್ಯೆ ಎದುರಾಗುತ್ತದೆ.

ಟಿವಿಗೆ ಅಡಿಕ್ಟ್ ಆಗುವ ಮಕ್ಕಳು ಹೊರಗಡೆ ಹೋಗಿ ಇತರ ಮಕ್ಕಳೊಂದಿಗೆ ಆಟವಾಡಲು ಆಸಕ್ತಿ ತೋರಿಸುವುದಿಲ್ಲ. ಇದರಿಂದ ಅವರಿಗೆ ಸ್ನೇಹಿತರೊಂದಿಗೆ ಬೆರೆಯುವುದು, ಹಂಚಿಕೊಳ್ಳುವುದು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸಾಮಾಜಿಕ ಕೌಶಲ್ಯಗಳು ಮರೆತುಹೋಗುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !