ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಹೆಚ್ಚುವರಿ ಸಮಯ ಕೋರಿದ್ದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಈ ಹಿಂದೆ ಜೂನ್ 30ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಮುಗಿಸಬೇಕೆಂದು ನೀಡಿದ್ದ ಗಡುವನ್ನು ಸುಪ್ರೀಂ ಕೋರ್ಟ್ ಈಗ ಆಗಸ್ಟ್ 31, 2026ರವರೆಗೆ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ.
ಜನಗಣತಿ ಚಟುವಟಿಕೆಗಳು ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದವು.
ಸರ್ಕಾರದ ಮನವಿಯನ್ನು ಭಾಗಶಃ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಆಗಸ್ಟ್ 31ರ ಒಳಗಾಗಿ ಯಾವುದೇ ಪರಿಸ್ಥಿತಿಯಲ್ಲೂ ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳಿಗೆ ಚುನಾವಣೆ ಮುಗಿಸಬೇಕು ಎಂದು ಸೂಚಿಸಿದೆ.
ಇದೇ ಕೊನೆಯ ಅವಕಾಶ, ಇನ್ಮುಂದೆ ಯಾವುದೇ ಕಾರಣಕ್ಕೂ ಮತ್ತೆ ಕಾಲಾವಕಾಶ ಕೇಳಿಕೊಂಡು ನ್ಯಾಯಾಲಯದ ಮೆಟ್ಟಿಲೇರಬಾರದು ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದೆ.



