May 20, 2026
Wednesday, May 20, 2026
spot_img

ರಾಜ್ಯದಲ್ಲಿ ಇನ್ಮುಂದೆ ತೆರೆದ ವಾಹನದಲ್ಲಿ ಸಫಾರಿಗೆ ಅವಕಾಶವಿಲ್ಲ: ಸಚಿವ ಈಶ್ವರ್ ಖಂಡ್ರೆ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ

ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಎರಡು ಸಾಕಾನೆಗಳ ಕಾಳಗದಿಂದಾಗಿ ಪ್ರವಾಸಿ ಮಹಿಳೆ ಮೃತಪಟ್ಟಿದ್ದು, ಈ ಬೆನ್ನಲ್ಲೇ ಸಫಾರಿಗಳಲ್ಲೂ ಪ್ರವಾಸಿಗರ ಸುರಕ್ಷತೆಗೂ ಆದ್ಯತೆ ನೀಡುವ ದೃಷ್ಟಿಯಿಂದ ಈ ನಿರ್ದೇಶನ ನೀಡಿದ್ದಾರೆ.

ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ದೇಶ ವಿದೇಶಗಳಿಂದಲೂ ಪ್ರವಾಸಿಗರು, ವನ್ಯಜೀವಿ ಪ್ರಿಯರು ರಾಜ್ಯದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿದಂತೆ ವಿವಿಧ ವನ್ಯಜೀವಿಧಾಮ ಮತ್ತು ಕಾನನಗಳಲ್ಲಿ ಸಫಾರಿಗೆ ಎಂದು ಆಗಮಿಸುತ್ತಾರೆ. ಈ ವೇಳೆ ಯಾವುದೇ ರೀತಿಯ ಜೀವಹಾನಿ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.

ಶಿಬಿರದ ಸನಿಹದಲ್ಲಿ ಆಂಬ್ಯುಲೆನ್ಸ್​ ವಾಹನ ಕಡ್ಡಾಯ

ಹೀಗಾಗಿ ಇನ್ಮುಂದೆ ಸಫಾರಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಸುರಕ್ಷಿತವಾದ ಬಸ್​​ ಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಜೊತೆಗೆ ಯಾವುದೇ ಪ್ರವಾಸಿಗರು ಅರಣ್ಯದೊಳಗೆ ಇಳಿಯಲು ಅವಕಾಶ ನೀಡದಂತೆ ಮತ್ತು ಪ್ರತಿ ಸಫಾರಿ ವಾಹನದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಸಫಾರಿ ಕೇಂದ್ರಗಳಿಗೆ ಸಮೀಪದಲ್ಲಿ ಆಂಬ್ಯುಲೆನ್ಸ್​ ವಾಹನ ಇರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !