ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಒಂದು ಹೊಸ ಅಧ್ಯಾಯ ಲಿಖಿತವಾಗಿದೆ. ಮುಖ್ಯಮಂತ್ರಿ ಸಿಎಂ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರವು ತನ್ನ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯೊಂದಿಗೆ ದ್ರಾವಿಡ ಸೀಮೆಯ ರಾಜಕಾರಣದಲ್ಲಿ ಬಹುಪಕ್ಷಗಳ ಮೈತ್ರಿಕೂಟದ ಹೊಸ ಯುಗ ಅಧಿಕೃತವಾಗಿ ಆರಂಭವಾದಂತಾಗಿದೆ.
ಕಾಂಗ್ರೆಸ್ ಪಕ್ಷದ 59 ವರ್ಷಗಳ ರಾಜಕೀಯಕ್ಕೆ ಮುಕ್ತಿ
ಈ ಬಾರಿಯ ಸಂಪುಟ ವಿಸ್ತರಣೆಯ ಅತ್ಯಂತ ಪ್ರಮುಖ ಹೈಲೈಟ್ ಎಂದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದೀರ್ಘಕಾಲದ ಬಳಿಕ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು. ಬರೋಬ್ಬರಿ 59 ವರ್ಷಗಳ ಸುದೀರ್ಘ ರಾಜಕೀಯ ವನವಾಸದ ನಂತರ ಕಾಂಗ್ರೆಸ್ ರಾಜ್ಯ ಸರ್ಕಾರದಲ್ಲಿ ಪಾಲುದಾರಿಕೆಯನ್ನ ಪಡೆದಿದೆ. ಮೈತ್ರಿಕೂಟದಲ್ಲಿರುವ ಕಾಂಗ್ರೆಸ್‌ನ ಒಟ್ಟು 5 ಶಾಸಕರಲ್ಲಿ ಇಬ್ಬರಿಗೆ (ಎಸ್. ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್) ಸಚಿವ ಸ್ಥಾನ ನೀಡಲಾಗಿದ್ದು, ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಮತ್ತೊಂದು ಪ್ರಾದೇಶಿಕ ಮಿತ್ರಪಕ್ಷವಾದ ವಿಸಿಕೆ ಪಕ್ಷದ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಮತ್ತೊಂದೆಡೆ, ಮೈತ್ರಿಯ ಭಾಗವಾಗಿರುವ ಐಯುಎಂಎಲ್ ಕೂಡ ಸರ್ಕಾರ ಸೇರಲು ನಿರ್ಧರಿಸಿದೆಯಾದರೂ, ಇಂದಿನ ಪ್ರಮಾಣ ವಚನ ಸಮಾರಂಭದಿಂದ ತಾತ್ಕಾಲಿಕವಾಗಿ ದೂರ ಉಳಿದಿದೆ. ತನ್ನ ಇಬ್ಬರು ಶಾಸಕರಲ್ಲಿ ಯಾರನ್ನು ಮಂತ್ರಿ ಮಾಡಬೇಕೆಂಬ ಗೊಂದಲ ಬಗೆಹರಿಯದ ಕಾರಣ, ಅಂತಿಮ ತೀರ್ಮಾನದ ಬಳಿಕ ಅವರ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಹುಮತಕ್ಕಿಂತ 26 ಸ್ಥಾನ ಹೆಚ್ಚು
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ರಾಜಕಾರಣಿ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷವು ಭರ್ಜರಿ ಪ್ರದರ್ಶನ ನೀಡಿ ಸ್ವಂತ ಬಲದಿಂದ 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 118 ಕ್ಕಿಂತ 10 ಸೀಟುಗಳು ಕಡಿಮೆಯಿದ್ದವು. ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ವಿಜಯ್, ಕಾಂಗ್ರೆಸ್, ಎಡಪಂಥೀಯರು ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಬಲಿಷ್ಠ ಮೈತ್ರಿ ಸರ್ಕಾರ ರಚಿಸಿದರು.
ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯ ವೇಳೆ ವಿರೋಧ ಪಕ್ಷವಾದ ಎಡಿಎಂಕೆಯ 24 ಬಂಡಾಯ ಶಾಸಕರು ಕೂಡ ಸಿಎಂ ವಿಜಯ್ ಪರವಾಗಿ ನಿಂತಿದ್ದರು. ಹೀಗಾಗಿ ಪ್ರಸ್ತುತ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಸರ್ಕಾರಕ್ಕೆ ಬರೋಬ್ಬರಿ 144 ಶಾಸಕರ ಬೆಂಬಲವಿದ್ದು, ಯಾವುದೇ ಆತಂಕವಿಲ್ಲದೆ ಸರ್ಕಾರ ಅತ್ಯಂತ ಸುಭದ್ರವಾಗಿದೆ. ಈ ಸಂಪುಟ ವಿಸ್ತರಣೆಯು ರಾಜ್ಯದಲ್ಲಿ ಡಿಎಂಕೆ ಮತ್ತು ಎಡಿಎಂಕೆಯ ಏಕಸ್ವಾಮ್ಯಕ್ಕೆ ದೊಡ್ಡ ಬ್ರೇಕ್ ಹಾಕಿದಂತಾಗಿದೆ.



