July 7, 2026
Tuesday, July 7, 2026
spot_img

ಎಥೆನಾಲ್‌ ಇಂಧನ ಸುರಕ್ಷಿತ: ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದ ಹರ್ದೀಪ್ ಸಿಂಗ್ ಪುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಥೆನಾಲ್‌ ಮಿಶ್ರಿತ E20 ಪೆಟ್ರೋಲ್‌ ವಾಹನಗಳ ಎಂಜಿನ್‌ಗೆ ಹಾನಿ ಉಂಟುಮಾಡುತ್ತದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳು ತಪ್ಪು ಅರ್ಥೈಸುವಿಕೆ ಮತ್ತು ವದಂತಿಗಳ ಆಧಾರಿತವಾಗಿದ್ದು, ಜನರು ಇಂತಹ ಸುದ್ದಿಗಳನ್ನು ನಂಬಬಾರದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

20 ಕೋಟಿ ದ್ವಿಚಕ್ರ ವಾಹನಗಳಲ್ಲಿ ಬಳಕೆ

E20 ಪೆಟ್ರೋಲ್‌ ದೇಶದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬಳಕೆಯಲ್ಲಿದೆ. ಸುಮಾರು 20 ಕೋಟಿ ದ್ವಿಚಕ್ರ ವಾಹನಗಳು ಮತ್ತು 20 ಲಕ್ಷಕ್ಕೂ ಹೆಚ್ಚು ಕಾರುಗಳು ಈ ಇಂಧನ ಬಳಸುತ್ತಿದ್ದು, ವಾಹನ ತಯಾರಕ ಕಂಪನಿಗಳು ಹಾಗೂ ಸರ್ವಿಸ್‌ ತಜ್ಞರಿಂದ ಯಾವುದೇ ಗಂಭೀರ ಸಮಸ್ಯೆ ವರದಿಯಾಗಿಲ್ಲ ಎಂದು ಸಚಿವರು ಹೇಳಿದ್ದಾರೆ.

E25 ಬಗ್ಗೆ ಇನ್ನೂ ಅಂತಿಮ ನಿರ್ಧಾರ ಇಲ್ಲ

E25 ಇಂಧನ ಜಾರಿಗೆ ಬರಲಿದೆ ಎಂಬ ಸುದ್ದಿಗಳಿಗೂ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಸದ್ಯ E25 ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಅಗತ್ಯ ಪರೀಕ್ಷೆಗಳು ನಡೆಯುತ್ತಿದ್ದು, ವರದಿಗಳು ಬಂದ ಬಳಿಕ ವಾಹನ ತಯಾರಕ ಸಂಸ್ಥೆಗಳು ಹಾಗೂ ಸಂಬಂಧಿತ ವಲಯಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

E20 ಜಾರಿಗೆ ಕಾರಣವೇನು?

ಕಚ್ಚಾ ತೈಲ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವುದು, ವಾಯುಮಾಲಿನ್ಯ ನಿಯಂತ್ರಿಸುವುದು ಹಾಗೂ ಕಬ್ಬು ಮತ್ತು ಜೋಳ ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಥೆನಾಲ್‌ ಮಿಶ್ರಿತ ಇಂಧನ ಬಳಕೆಯನ್ನು ಉತ್ತೇಜಿಸುತ್ತಿದೆ. 2026ರ ಏಪ್ರಿಲ್‌ 1ರಿಂದ ದೇಶಾದ್ಯಂತ ಗರಿಷ್ಠ 20% ಎಥೆನಾಲ್‌ ಮಿಶ್ರಿತ E20 ಪೆಟ್ರೋಲ್‌ ಕಡ್ಡಾಯಗೊಳಿಸಲಾಗಿದೆ. ಹೊಂದಾಣಿಕೆಯ ವಾಹನಗಳಿಗೆ E20 ಸುರಕ್ಷಿತವಾಗಿದ್ದು, ಭವಿಷ್ಯದಲ್ಲಿ ಹೆಚ್ಚಿನ ಮಿಶ್ರಣದ ಇಂಧನ ಜಾರಿಗೆ ವೈಜ್ಞಾನಿಕ ಪರೀಕ್ಷೆಗಳ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !